ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಮಾಡಿದ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ಶಿಫಾರಸ್ಸು ಮಾಡಿದೆ.
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿರುವ ಪ್ರಕರಣ ಸಂಬಂಧ ಸರ್ಕಾರಕ್ಕೆ ನ್ಯಾ. ಮೈಕಲ್ ಕುನ್ಹಾ ಅವರ ವರದಿಯನ್ನು ಸಲ್ಲಿಸಲಾಗಿದೆ. ಈ ವರದಿಯಲ್ಲಿ ಮತ್ತಷ್ಟು ಸ್ಫೋಟಕ ಅಂಶ ಬಹಿರಂಗವಾಗಿದ್ದು, ಆರ್ಸಿಬಿ, ಡಿಎನ್ಎ, ಕೆಎಸ್ಸಿಎ ಮತ್ತು ಪೊಲೀಸರ ವಿರುದ್ಧ ದಂಡನೀಯ ಪ್ರಕರಣ ದಾಖಲು ಮಾಡಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಘಟನೆಗೆ ಕೆಎಸ್ಸಿಎ, ಡಿಎನ್ಎ, ಆರ್ಸಿಬಿ ಹಾಗೂ ಪೊಲೀಸರು ನೇರ ಹೊಣೆಯಾಗಿದ್ದಾರೆ. ಕಾರ್ಯಕ್ರಮ ನಡೆಸುವುದು ಅಸಾಧ್ಯವೆಂದು ಗೊತ್ತಿದ್ದರೂ ಎಲ್ಲರೂ ಶಾಮೀಲಾಗಿ ಕಾರ್ಯಕ್ರಮ ನಡೆಸಿದರು. ಈ ಎಲ್ಲರ ಕರ್ತವ್ಯ ಲೋಪ, ನಿರ್ಲಕ್ಷ್ಯತನದ ಪರಮಾವಧಿ ಎದ್ದು ಕಾಣುತ್ತಿದೆ. ಬಂದೋಬಸ್ತ್ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ ಎಂಬ ವಿಚಾರ ತನಿಖೆಯಲ್ಲಿ ಬಹಿರಂಗವಾಗಿದೆ.
ಅಲ್ಲದೇ ಕ್ರೀಡಾಂಗಣದ ಒಳಗೆ 79 ಪೊಲೀಸರು ಮಾತ್ರ ಇದ್ದರು. ಹೊರಗೆ ಪೊಲೀಸರು ಇರಲಿಲ್ಲ. ತುರ್ತು ವಾಹನ, ಅಂಬುಲೆನ್ಸ್ ವ್ಯವಸ್ಥೆ ಅಪೂರ್ಣವಾಗಿತ್ತು. 3:25ಕ್ಕೆ ಕಾಲ್ತುಳಿತ ಸಂಭವಿಸಿದ್ದರೂ. ೫:೩೦ರವರೆಗೆ ಪೊಲೀಸ್ ಕಮಿಷನರ್ಗೆ ಮಾಹಿತಿ ಇಲ್ಲ. 4 ಗಂಟೆಗೆ ಜಂಟಿ ಪೊಲೀಸ್ ಆಯುಕ್ತರು ಕ್ರೀಡಾಂಗಣಕ್ಕೆ ಬಂದಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ವರದಿಯನ್ನು ಸರ್ಕಾರದ ಸಚಿವ ಸಂಪುಟ ಅಂಗೀಕರಿಸಿದರೆ ದಾಖಲಾಗಿರುವ ಪ್ರಕರಣದಲ್ಲಿ ಈ ಅಧಿಕಾರಿಗಳನ್ನು ಆರೋಪಿಗಳಾಗಿ ಸೇರಿಸುವುದು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಮಾಡಿದ್ದು ಸರಿಯಲ್ಲ. ಗೇಟ್ಗಳು ಅತ್ಯಂತ ಚಿಕ್ಕದಾಗಿತ್ತು. ಕ್ರೀಡಾಂಗಣದಲ್ಲಿ ಫೈರ್ ಸೇಫ್ಟಿ ವ್ಯವಸ್ಥೆ ಇರಲಿಲ್ಲ. 1,650 ಪೊಲೀಸ್ ಅಧಿಕಾರಿಗಳು ಭದ್ರತೆಗೆ ನಿಯೋಜನೆ ಆಗಿತ್ತು ಎಂಬುದು ಸುಳ್ಳು. 800ಕ್ಕಿಂತ ಕಡಿಮೆ ಜನರ ಭದ್ರತೆಗೆ ನಿಯೋಜನೆ ಆಗಿದ್ದರು ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಸಂಜೆ 5:30ರ ಬಳಿಕ ಯಾವುದೇ ಅಹಿತಕರ ಘಟನೆ ನಡೆದಿಲ್ಲ. 5:30ಕ್ಕೆ ವಿಧಾನಸೌಧದ ಬಳಿಯ ಕಾರ್ಯಕ್ರಮ ಮುಗಿದಿದೆ. ವಿಧಾನಸೌಧದ ಬಳಿ ಇದ್ದ ಜನ ಸ್ಟೇಡಿಯಂ ಬಳಿ ಬಂದಿಲ್ಲ. ಕರ್ತವ್ಯ ಲೋಪವೆಸಗಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಹಾಗೂ ಪೊಲೀಸರ ವಿರುದ್ಧ ಎಫ್ಐಆರ್ಗೆ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.
 
				 
         
         
         
															 
                     
                     
                    


































 
    
    
        