ಚಿತ್ರದುರ್ಗ: ಬಸವ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಬಿಡುಗಡೆ ಮಾಡಿದ್ದ 35 ಕೋಟಿ ಮೊತ್ತ ದುರ್ಬಳಕೆಯಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ಎಚ್.ಏಕಾಂತಯ್ಯ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.
ದೂರು ಆಧರಿಸಿ ಜಿಲ್ಲಾಧಿಕಾರಿ-ಯವರು ಹೆಚ್ಚುವರಿ ಜಿಲ್ಲಾಧಿಕಾರಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನೊಳಗೊಂಡ ತನಿಖಾ ಸಮಿತಿ ರಚಿಸಿದ್ದರು. ಸಮಿತಿಯು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದು ಮಠದ ಆಡಳಿತ ಮಂಡಳಿ ಅನುದಾನ ಬಳಕೆ ಕುರಿತಂತೆ ಅಧಿಕೃತವಾದ ದಾಖಲೆ ಒದಗಿಸಿಲ್ಲ ಎಂದು ತಿಳಿಸಿದೆ.
ಮುರುಘಾ ಮಠದ ಹಿಂಭಾಗದ ಜಾಗದಲ್ಲಿ ಬೃಹತ್ ಬಸವ ಪ್ರತಿಮೆ ನಿರ್ಮಾಣ ಸಂಬಂಧ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ಬಳಕೆಯಲ್ಲಿ ಸ್ಪಷ್ಟತೆ ಇಲ್ಲ. ಸರ್ಕಾರ ಈ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕೋರಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಎಡಿಸಿ ವರದಿ ಆಧರಿಸಿ ಜಿಲ್ಲಾ-ಧಿಕಾರಿಯವರು ಉನ್ನತ ಮಟ್ಟದ ತನಿಖೆಗೆ ಕೋರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈವರೆಗೆ 26.35 ಕೋಟಿ ಖರ್ಚಾಗಿದ್ದು, ಉಳಿಕೆ ಹಣದ ಬಗ್ಗೆ ಬ್ಯಾಂಕ್ ಪಾಸ್ ಪುಸ್ತಕ ಸಮೇತ ದಾಖಲೆ ಒದಗಿಸುವಂತೆ ಮಠದ ಆಡಳಿತ ಮಂಡಳಿಗೆ ಕೋರಲಾಗಿತ್ತು. ಆದರೆ ಮಠದವರು ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಉನ್ನತ ಮಟ್ಟದ ತನಿಖೆಗೆ ಕೋರಲಾಗಿದೆ!