ಚಿತ್ರದುರ್ಗ: ಚಿತ್ರದುರ್ಗ ಡಿ.ಸಿ.ಸಿ ಬ್ಯಾಂಕ್ 2024-25ನೇ ಸಾಲಿನಲ್ಲಿ ಬ್ಯಾಂಕ್ ರೂ.1338.40 ಕೋಟಿ ವ್ಯವಹಾರ ನಡೆಸಿದ್ದು, ರೂ.8 ಕೋಟಿ 3 ಲಕ್ಷ ನಿವ್ವಳ ಲಾಭಗಳಿಸಿ ಪ್ರಗತಿಯತ್ತ ಸಾಗುತ್ತಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಚಿತ್ರದುರ್ಗ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಿ.ಸುಧಾಕರ್
ಚಿತ್ರದುರ್ಗ ಡಿ.ಸಿ.ಸಿ ಬ್ಯಾಂಕಿನಲ್ಲಿ ಈಚೆಗೆ ನಡೆದ 2024-25ನೇ ಸಾಲಿನ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಸರ್ಕಾರದಿಂದಾಗಲೀ ಅಥವಾ ಇನ್ನಾವುದೇ ಮೂಲದಿಂದಾಗಲೀ ಹಣಕಾಸಿನ ಅನುದಾನ ಲಭ್ಯವಾಗುತ್ತಿರುವುದಿಲ್ಲ. ಬ್ಯಾಂಕ್ ಸಾರ್ವಜನಿಕರಿಂದ ಠೇವಣಿ ಸಂಗ್ರಹಣೆ ಮಾಡಿ ಮತ್ತು ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕಿನಿಂದ ಸಾಲ ಪಡೆದು ರೈತರಿಗೆ ಸಾಲ ವಿತರಿಸುತ್ತಿದೆ. ಬ್ಯಾಂಕಿಗೆ ಆರಂಭದಲ್ಲಿ ಸುಮಾರು 25 ವರ್ಷಗಳ ಹಿಂದೆ ಸರ್ಕಾರದಿಂದ ರೂ.1. ಕೋಟಿ ಷೇರು ಹಣ ಬಂದಿರುತ್ತದೆ. ಅದರೂ ಚಿತ್ರದುರ್ಗ ಡಿ.ಸಿ.ಸಿ ಬ್ಯಾಂಕ್ ರೈತರಿಗೆ ಆರ್ಥಿಕವಾಗಿ ನೆರವು ನೀಡುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಬ್ಯಾಂಕಿನ ಎಲ್ಲಾ ಸದಸ್ಯ ಸಹಕಾರ ಸಂಘಗಳು ಬದ್ದತೆಯಿಂದ ಕೆಲಸ ನಿರ್ವಹಿಸಿದರೆ ಹಾಗೂ ಸುಸ್ತಿ ಸಾಲ ಮರುಪಾವತಿ ಮಾಡಿದರೆ ನಿಮ್ಮ ಡಿ.ಸಿ.ಸಿ ಬ್ಯಾಂಕ್ ಉಳಿಯುತ್ತದೆ ಹಾಗೂ ಬ್ಯಾಂಕಿನಿಂದ ಎಲ್ಲಾ ರೀತಿಯ ಸಾಲ ಸೌಲಭ್ಯ ನೀಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಬ್ಯಾಂಕ್ 2024-25ನೇ ಸಾಲಿನಲ್ಲಿ ಕೃಷಿ ಉದ್ದೇಶಗಳಿಗಾಗಿ 56950 ರೈತರಿಗೆ ರೂ.48689.52 ಲಕ್ಷ ಬೆಳೆ ಸಾಲ ವಿತರಣೆ ಮಾಡಿದೆ. ಈ ಪೈಕಿ ಪರಿಶಿಷ್ಟ ಜಾತಿಯ 7043 ರೈತರಿಗೆ ರೂ.4791.61 ಲಕ್ಷ, ಪರಿಶಿಷ್ಟ ಪಂಗಡ 8704 ರೈತರಿಗೆ ರೂ.6573.55 ಲಕ್ಷ ಬೆಳೆ ಸಾಲ ವಿತರಣೆ ಮಾಡಲಾಗಿದೆ. ಒಟ್ಟಾರೆ ಎಸ್.ಸಿ, ಎಸ್.ಟಿ ವರ್ಗದ ರೈತರಿಗೆ 15747 ರೈತರಿಗೆ ರೂ.11365.16 ಲಕ್ಷ ಬೆಳೆ ಸಾಲ ವಿತರಣೆ ಮಾಡಲಾಗಿದೆ. 857 ರೈತರಿಗೆ ರೂ.5334.71 ಲಕ್ಷ ಮಧ್ಯಮಾವಧಿ ಸಾಲ ವಿತರಣೆ ಮಾಡಿದೆ. ಅಲ್ಲದೇ 2025-26ನೇ ಸಾಲಿಗೆ 3000 ಹೊಸ ರೈತರಿಗೆ ರೂ.15.00 ಕೋಟಿ ಅಲ್ಪಾವಧಿ ಕೃಷಿ ಬೆಳೆ ಸಾಲ, 1000 ಹೊಸ ರೈತರಿಗೆ ರೂ.52.00 ಕೋಟಿ ಮಧ್ಯಮಾವಧಿ ಸಾಲ ಮತ್ತು ರೂ.285.10 ಕೋಟಿ ಕೃಷಿಯೇತರ ಸಾಲ ನೀಡುವ ಗುರಿ ಹೊಂದಲಾಗಿದೆ. ಆದ್ದರಿಂದ ಈ ಸಾಲಗಳನ್ನು ನೀಡಲು ಠೇವಣಿ ಸಂಗ್ರಹಣೆ ಬಹಳ ಮುಖ್ಯವಾಗಿರುತ್ತದೆ ಎಂದು ಹೇಳಿದರು.
2025ರ ಮಾರ್ಚ್ 31ರ ಅಂತ್ಯಕ್ಕೆ ರೂ.630.68 ಕೋಟಿ ಠೇವಣಿ ಸಂಗ್ರಹಿಸಿದ್ದು, 2025-26ನೇ ಸಾಲಿಗೆ ರೂ.739.68 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರು ಹಾಗೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಬ್ಯಾಂಕ್ ಪ್ರಗತಿಯತ್ತ ಸಾಗುತ್ತಿದ್ದು, ಬ್ಯಾಂಕಿನ ಅಭಿವೃದ್ದಿಗೆ ತಮ್ಮೆಲ್ಲರ ಸಹಕಾರ ಮುಖ್ಯವಾಗಿದ್ದು, ಪ್ರಸ್ತುತ ಸಾಲಿನಲ್ಲಿ ಬ್ಯಾಂಕ್ ರೂ.8.03 ಕೋಟಿ ಲಾಭಗಳಿಸಿ ಸದಸ್ಯರಿಗೆ ಶೇ.2% ಡಿವಿಡೆಂಡ್ ನೀಡಿರುವುದು ಸಂತಸ ತಂದಿದೆ.
ಶೀಘ್ರದಲ್ಲೇ ಭದ್ರ ಮೇಲ್ದಂಡೆ ಯೋಜನೆಯು ಪೂರ್ಣಗೊಳ್ಳಲ್ಲಿದ್ದು, ಇದರಿಂದ ಜಿಲ್ಲೆಯ ರೈತರಿಗೆ ಅನೂಕೂಲವಾಗಲಿದೆ. ಪ್ರಯುಕ್ತ ರೈತರು ತಾವು ಪಡೆದ ಸಾಲವನ್ನು ಸೂಕ್ತ ಸಮಯಕ್ಕೆ ಮರುಪಾವತಿಸಿ ಬ್ಯಾಂಕಿನಿಂದ ಹೆಚ್ಚಿನ ಸಾಲ ಸೌಲಭ್ಯ ಪಡೆಯಲು ಸೂಚಿಸಿದರು. ಬ್ಯಾಂಕಿನ ಅಧ್ಯಕ್ಷರಾದ ಡಿ.ಸುಧಾಕರ್ ಅವರಿಗೆ ರಾಜ್ಯ ಸರ್ಕಾರವು ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿರುವುದು. ನಮ್ಮೆಲ್ಲರಿಗೂ ಅತೀವ ಸಂತೋಷ ಉಂಟು ಮಾಡಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪಡೆದ ಬ್ಯಾಂಕಿನ ಅಧ್ಯಕ್ಷ ಡಿ.ಸುಧಾಕರ್ ಅವರಿಗೆ ಬ್ಯಾಂಕಿನ ಉಪಾಧ್ಯಕ್ಷರು ಮತ್ತು ನಿರ್ದೇಶಕರು, ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು.
ಸಭೆಯಲ್ಲಿ ಸಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಹೆಚ್.ಬಿ. ಮಂಜುನಾಥ್, ಬ್ಯಾಂಕಿನ ನಿರ್ದೇಶಕರಾದ ಎಸ್.ಆರ್.ಗಿರೀಶ್, ಹೆಚ್.ಟಿ.ನಾಗರೆಡ್ಡಿ, ಎಂ.ನಿಶಾನಿ ಜಯಣ್ಣ, ವಿನೋದಸ್ವಾಮಿ, ಕೆ.ಜಗಣ್ಣ, ಹೆಚ್.ಎಂ ದ್ಯಾಮಣ್ಣ, ರಘುರಾಮರೆಡ್ಡಿ, ಪಿ.ತಿಪ್ಪೇಸ್ವಾಮಿ, ಟಿ.ಮಹಾಂತೇಶ್, ಡಾ.ಕೆ.ಅನಂತ್, ಓ.ಮಂಜುನಾಥ್, ವ್ಯವಸ್ಥಾಪಕ ನಿರ್ದೇಶಕರಾದ ಇಲ್ಯಾಸ್ ಉಲ್ಲಾ ಷರೀಫ್, ಸಹಕಾರ ಸಂಘಗಳ ಉಪ ನಿಬಂಧಕರಾದ ಆರ್.ಎಸ್.ದಿಲೀಪ್ಕುಮಾರ್, ವೃತ್ತಿಪರ ನಿರ್ದೇಶಕರಾದ ಎ.ಸುಮಂತ್, ಸಿ.ಇ.ಮಹೇಶ್ವರಪ್ಪ ಮತ್ತು ಬ್ಯಾಂಕಿನ ಸಿಬ್ಬಂದಿಗಳು, ಜಿಲ್ಲೆಯ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ನಿರ್ದೇಶಕರು ಉಪಸ್ಥಿತರಿದ್ದರು.