ಚಿತ್ರದುರ್ಗ : ಚಿತ್ರದುರ್ಗ ನಗರದ ವಿ.ಪಿ. ಬಡಾವಣೆಯಲ್ಲಿರುವ ಜಿಲ್ಲಾ ತೋಟಗಾರಿಕೆ ಇಲಾಖೆ ಆವರಣದಲ್ಲಿ ಇದೇ ಫೆ.15 ರಿಂದ 17 ರವರೆಗೆ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಹೆಣ್ಣಿಗೆ ಗೌರವ ಸೂಚಕ ಕಲಾಕೃತಿ, ಮಯೂರವರ್ಮ, ಸ್ವಾವಲಂಬಿ ರೈತ ಹಾಗೂ ವಾಣಿವಿಲಾಸ ಸಾಗರ ಕಲಾಕೃತಿ 32ನೇ ಫಲ-ಪುಷ್ಪ ಪ್ರದರ್ಶನದ ಈ ಬಾರಿಯ ವಿಶೇಷ ಆಕರ್ಷಣೆ ಎಂದು ತೋಟಗಾರಿಕೆ ಉಪನಿರ್ದೇಶಕಿ ಜಿ.ಸವಿತಾ ಹೇಳಿದರು.
ಜಿಲ್ಲಾ ಫಲ-ಪುಷ್ಪ ಪ್ರದರ್ಶನವನ್ನು ಪ್ರತಿ ವರ್ಷವೂ ಆಚರಿಸುತ್ತಿದ್ದು, ವಿವಿಧ ಜಾತಿಯ ಹೂಗಳು, ಹಣ್ಣುಗಳು, ತರಕಾರಿಗಳು, ಮತ್ತು ಹಲವು ವಿಶೇಷ ಬಗೆಯ ಅಲಂಕಾರಿಕಾ ಗಿಡಗಳನ್ನು ಬೆಳೆಸಿ ಪ್ರದರ್ಶಿಸಲಾಗುತ್ತಿದೆ. ಫಲ-ಪುಷ್ಪ ಪ್ರದರ್ಶನದಲ್ಲಿ ಹೂವಿನ ಗಿಡಗಳ ಬೃಹತ್ ಪ್ರದರ್ಶನ, ಕುಬ್ಜ ಮರ (ಬೋನ್ಸಾಯ್) ಗಿಡಗಳು, ತರಕಾರಿ ಕೆತ್ತನೆ, ಅಲಂಕಾರಿಕಾ ಗಿಡಗಳ ಜೋಡಣೆ ಹಾಗೂ ಜಿಲ್ಲೆಯ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ ಏರ್ಪಡಿಸಿ, ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಬಿಸಿಲು ನಾಡಿನಲ್ಲಿ ಪುಷ್ಪಗಳ ಕಾರುಬಾರು: ವಿವಿಧ ಪುಷ್ಪ ಜೋಡಣೆಗಳಿಗೆ ಹಲವು ಬಗೆಯ ವಿಶೇಷ ಹೂಗಳನ್ನು ಬಳಸುತ್ತಿರುವುದರ ಜೊತೆಗೆ ಕುಂಡದಲ್ಲಿ ಬೆಳೆದ ಚಿತ್ತಾಕರ್ಷಕ ವರ್ಣಗಳಿಂದ ಕೂಡಿದ ಸುಮಾರು 50ಕ್ಕೂ ಹೆಚ್ಚು ಬಗೆಯ 50 ಸಾವಿರ ವಿವಿಧ ಜಾತಿಯ ಹೂವಿನಗಿಡಗಳನ್ನು ಬೆಳೆಯಲಾಗಿದೆ.
ಆರ್ಕಿಡ್ಸ್, ಕಾಕ್ಸ್ ಕೂಂಬ್, ಸೆಲೋಶಿಯಾ, ಗಾಕ್ಸೀನಿಯ, ಕೆಲಂಚಾ, ಲಿಲ್ಲಿಸ್, ಇಂಪೇಷನ್ಸ್ (ಮಿಕ್ಸ್‍ಡ್), ಡಾಲಿಯಾ (ಡ್ವಾರ್ಫ್ ಮತ್ತು ಟಾಲ್) ಸಾಲ್ವಿಯಾ (ಕೆಂಪು, ನೀಲಿ, ಕೇಸರಿ,) ಚೆಂಡು ಹೂ, ಚಿಂತಾಮಣಿ ಚೆಂಡು ಹೂ, ಜಿನಿಯಾ (ಡ್ವಾರ್ಫ್ ಮತ್ತು ಟಾಲ್), ಪೆಟೂನಿಯಾ (ಸಿಂಗಲ್ ಮತ್ತು ಡಬಲ್ ವರ್ಲ್), ಕಾಸ್‍ಮಾಸ್ ಮಿಕ್ಸ್ (ಡ್ವಾರ್ಫ್ ಮತ್ತು ಟಾಲ್), ಬಾಲ್ಸಂ, ಜಿರೇನಿಯಂ, ಆಂಟಿರಿನಮ್ ಮಿಕ್ಸ್ ಡಯಾಂತಸ್ ಮಿಕ್ಸ್, ಕ್ಯಾಲೊಂಡೋಲಾ, ಪಾಟ್ ಕ್ರೈಸಾಂತೆಮ್, ಪೆಂಟಾಸ್, ಯುಪೋರ್ಬಿಯ ಮಿಲ್ಲಿ, ಫಾಯಿನ್‍ಸಿಟಿಯಾ, ಬಿಗೋನಿಯಾ, ವಿಂಕಾ, ಇತ್ಯಾದಿ ವಿವಿಧ ಪುಷ್ಪ ಸಸಿಗಳು, ನೂರಕ್ಕೂ ಹೆಚ್ಚು ಬಗೆಯ ತಳಿಗಳು, ಪ್ರದರ್ಶಿಸುವುದರೊಂದಿಗೆ ಪುಷ್ಪ ರಸಿಕರಿಗೆ ಪ್ರದರ್ಶನ ಮುದ ನೀಡಲಿದೆ ಎಂದು ಹೇಳಿದರು.
ಹೆಣ್ಣಿಗೆ ಗೌರವಸೂಚಕ ಕಲಾಕೃತಿ: ನಾವು ನಮ್ಮ ನಿತ್ಯ ಜೀವನದಲ್ಲಿ ಹೆಣ್ಣಿಗೆ ಗೌರವಯುತ ಸ್ಥಾನ ನೀಡಿದ್ದು, ನಮ್ಮ ನಿಸರ್ಗವನ್ನು ಪ್ರಕೃತಿ ಮಾತೆ ಎಂದು, ಭೂಮಿಯನ್ನು ಭೂತಾಯಿ ಎಂದು, ಗಂಗೆಯನ್ನು ಗಂಗಾಮಾತೆ ಎಂದು, ನಮ್ಮ ದೇಶವನ್ನು ಭಾರತಮಾತೆ ಎಂದು ಹಾಗೂ ನಮ್ಮ ರಾಜ್ಯವನ್ನು ಕನ್ನಡದ ಭುವನೇಶ್ವರಿಯ ಸ್ವರೂಪದಲ್ಲಿ ಪೂಜಿಸುತ್ತಾ ಬಂದಿದ್ದೇವೆ. ನಮ್ಮ ಹುಟ್ಟಿನಿಂದ ಸಾವಿನವರೆಗೂ ಹೆಣ್ಣು ತಾಯಿಯಾಗಿ, ಸತಿಯಾಗಿ, ಸೋದರಿಯಾಗಿ, ಪುತ್ರಿಯಾಗಿ, ಸೊಸೆಯಾಗಿ ಹೀಗೆ ಸಂಸಾರದ ಕಡಲಿನಲ್ಲಿ ವಿವಿಧ ಸ್ವರೂಪಗಳಲ್ಲಿ ಸ್ಪಂದಿಸುತ್ತಾ ಬಂದಿದ್ದಾಳೆ. ಹೆಣ್ಣಿಗೆ ಇಷ್ಟೆಲ್ಲಾ ಸ್ಥಾನಮಾನ ನೀಡಿದ್ದರೂ ಪ್ರಸ್ತುತ ಸಮಾಜದಲ್ಲಿ ಹೆಣ್ಣು ವಿವಿಧ ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿರುವುದನ್ನು ನೋಡಬಹುದು.
ಹೆಣ್ಣಿನ ಮೇಲಿನ ಅತ್ಯಾಚಾರ, ಭ್ರೂಣಹತ್ಯೆ, ವರದಕ್ಷಿಣೆ ಕಿರುಕುಳ, ಪೋಕ್ಸೋ ಪ್ರಕರಣಗಳು ಇತ್ಯಾದಿಯಾಗಿ ಶೋಷಣೆಗೆ ಒಳಗಾಗುತ್ತಿದ್ದಾಳೆ. ಈ ಎಲ್ಲಾ ವಿದ್ಯಮಾನ ಗಮನದಲ್ಲಿಟ್ಟುಕೊಂಡು ಹೆಣ್ಣನ್ನು ಕೇವಲ ಒಬ್ಬ ಹೆಣ್ಣಾಗಿ, ಅಬಲೆಯಾಗಿ ನೋಡದೆ, ಸಬಲೆಯಾಗಿ ನೋಡಲಿ ಎಂಬ ಮಹಾತ್ವಾಕಾಂಕ್ಷೆಯೊಂದಿಗೆ ಹಾಗೂ ಹೆಣ್ತನಕ್ಕೆ ಘಾಸಿಯಾಗದಂತೆ ಗೌರವಿಸೋಣ ಎಂಬ ಅರ್ಥದ ಕಲಾಕೃತಿ ಪ್ರದರ್ಶಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ತೋಟಗಾರಿಕೆ ಸಂಘದ ಸಲಹಾ ಸಮಿತಿ ಅಧ್ಯಕ್ಷ ಜಿ.ಎಸ್.ಉಜ್ಜಿನಪ್ಪ ಜಿಲ್ಲಾ ತೋಟಗಾರಿಕೆ ಸಂಘದ ಖಜಾಂಚಿ ನಾಗರಾಜ್ ಬೇದ್ರೆ, ಕಾರ್ಯದರ್ಶಿ ಗಿರೀಶ್, ನಿರ್ದೇಶಕರಾದ ಶ್ವೇತಾ ವಿಶ್ವನಾಥ್, ಸತ್ಯನಾರಾಯಣ ನಾಯ್ಡು, ರೀನಾ ವೀರಭದ್ರಪ್ಪ, ಸುಮನಾ ತಿಮ್ಮಾರೆಡ್ಡಿ ಇದ್ದರು.