ಚಿತ್ರದುರ್ಗ: ಜನಪದ ಕಲೆಗಳು ಮನುಷ್ಯನಷ್ಟೇ ಪ್ರಾಚೀನವಾದವು. ಜನಪದ ಕಲೆಯನ್ನು ಆಯಾ ದೇಶದ ಆತ್ಮಚರಿತ್ರೆ ಎಂದರೆ ತಪ್ಪಾಗಲಾರದು ಎಂದು ಪ್ರಗತಿಪರ ಚಿಂತಕ, ಸಾಹಿತಿ ಹೆಚ್.ಆನಂದ್ ಕುಮಾರ್ ಹೇಳಿದರು.
ನಗರದ ಶ್ರೀ ಸಿದ್ಧೇಶ್ವರ ವಸತಿ ನಿಲಯದ ಸಭಾಂಗಣದಲ್ಲಿ ಶ್ರೀ ಸಿದ್ಧೇಶ್ವರ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಸಂಯುಕ್ತಾಶ್ರಯದಲ್ಲಿ ಸೋಮವಾರ ಜನಪದೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನೆಲಮೂಲ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಜನಪದ ಕಲೆಗಳಾದ ಕಂಸಾಳೆ, ಡೊಳ್ಳು ಕುಣಿತ, ಗೊರವರ ಕುಣಿತ, ಸೋಬಾನೆ, ಬೀಸುವ ಕಲ್ಲಿನ ಪದಗಳು, ತಮಟೆವಾದ್ಯ, ವೀರಗಾಸೆ, ಯಕ್ಷಗಾನ, ಭಜನೆ, ಪಟಾಕುಣಿತ, ನಂದಿ ಕುಣಿತ, ಕೋಲಾಟ ಮುಂತಾದ ಜನಪದ ಕಲೆಗಳು ನಮ್ಮ ದೇಸಿ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಹಾಗಾಗಿ ಇಂದಿನ ಯುವ ಪೀಳಿಗೆ ಇಂಥಹ ಜನಪದ ಕಲೆಗಳನ್ನು ಮೈಗೂಡಿಸಿಕೊಂಡು ಉಳಿಸಿ ಬೆಳಸಬೇಕೆಂದು ತಿಳಿಸಿದರು.
ನೌಕರರ ಸಂಘದ ನಿರ್ದೇಶಕಿ ಡಾ.ಲೋಲಾಕ್ಷಮ್ಮ ಮಾತನಾಡಿ, ಕಲೆಗಳು ವಿಲಾಸಕ್ಕಾಗಿ ಅಲ್ಲ, ವಿಕಾಸಕ್ಕಾಗಿ. ಆದ್ದರಿಂದ ಮಕ್ಕಳು ಇಂತಹ ಕಲೆಗಳನ್ನು ಕರಗತ ಮಾಡಿಕೊಂಡು ಮೌಲ್ಯವಂತರಾಗಬೇಕು ಎಂದು ತಿಳಿಸಿದರು.
ಸಹಾಯಕ ಪ್ರಾಧ್ಯಾಪಕ ಮಂಜುನಾಥ್ ಮಾತನಾಡಿ, ಇಂದಿನ ಯುವ ಪೀಳಿಗೆ ಮೊಬೈಲ್ ಗೀಳಿನಿಂದ ಹೊರಬಂದು ಜನಪದ ಕಲೆ, ವಚನ ಸಾಹಿತ್ಯ, ಜನಪದ ಗೀತೆ ಹೀಗೆ ಮುಂತಾದ ಸಾಹಿತ್ಯ ಮತ್ತು ಸಂಗೀತದ ಕಡೆ ಗಮನ ಹರಿಸಿದ್ದಲ್ಲಿ ತಮ್ಮ ಬದುಕು ಹಸನಾಗುತ್ತದೆ ಎಂದರು.
ಕಲಾವಿದರಾದ ಶ್ರೀನಾಥ್, ವೀರೇಂದ್ರ, ನವೀನ್ ಕುಮಾರ್, ರೇವಮ್ಮ, ಮನೋರಂಜನ್, ಕೆ.ಈ.ಐಶ್ವರ್ಯ, ಎಸ್.ಮೈಲಾರಿ ತುರುವನೂರು, ಯಲ್ಲಪ್ಪ ಐಹೊಳೆ, ಹೇಮಂತ್‌ರಾಜ್ ಓಬಣ್ಣನಹಳ್ಳಿ, ಜಯಣ್ಣ, ಗಾಯಕಿ ಕೆ.ಹೆಚ್.ಭಾಗ್ಯಮ್ಮ, ಗಾಯಕ ಅಮುಕುಂದಿ ಕೆ.ಗಂಗಾಧರ ಮುಂತಾದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧೇಶ್ವರ ಕಲಾ ಸಂಘದ ಕಾರ್ಯದರ್ಶಿ ಟಿ.ಪುಣ್ಯವತಿ, ಬಾಬು, ಮೂರ್ತಿ, ಸೋಬಾನೆ ಕಲಾವಿದೆ ಯಶೋಧಮ್ಮ, ಚನ್ನಬಸಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.