ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ಶೀಟ್ ಸಲ್ಲಿಕೆಗೆ ತಯಾರಿ ಮಾಡಿಕೊಂಡಿರುವ ಸಿಐಡಿ, 11 ಮಂದಿ ಸಾವಿಗೆ ಆರ್ಸಿಬಿಯೇ ನೇರ ಹೊಣೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಿದೆ.
ತನಿಖೆ ಮುಗಿಸಿ ಚಾರ್ಜ್ಶೀಟ್ ಸಲ್ಲಿಕೆಗೆ ಸಿಐಡಿ ತಯಾರಿಯಲ್ಲಿದೆ. ತನಿಖೆ ವೇಳೆ ಆರ್ಸಿಬಿ, ಡಿಎನ್ಎ, ಕೆಎಸ್ಸಿಎ ವಿರುದ್ಧ ಹಲವು ಸಾಕ್ಷ್ಯಗಳು ಸಿಕ್ಕಿವೆ. ನ್ಯಾಯಾಲಯಕ್ಕೆ ಸಲ್ಲಿಸಲು 2,200 ಕ್ಕೂ ಪುಟಗಳ ಚಾರ್ಜ್ಶೀಟ್ ತಯಾರಾಗಿದೆ. ಆರ್ಸಿಬಿ ಜೊತೆ ಕೆಎಸ್ಸಿಎ, ಡಿಎನ್ಎ ನೇರ ಹೊಣೆ ಅನ್ನೋದು ತನಿಖೆ ವೇಳೆ ಬಯಲಾಗಿದೆ. ಹೀಗಾಗಿ ಸಿಐಡಿ ಚಾರ್ಜ್ಶೀಟ್ನಲ್ಲಿ ಮೂರು ಸಂಸ್ಥೆಗಳನ್ನ ಘಟನೆಯ ನೇರ ಹೊಣೆ ಮಾಡಿದೆ.
ಸರಿಯಾದ ಪ್ಲಾನ್ ಇಲ್ಲದೆಯೇ ಕಾರ್ಯಕ್ರಮ ಆಯೋಜಿಸಲಾಗಿತ್ತು. ಠರಾವೋ ಸರಿಯಾಗಿ ಮಾಡಿಲ್ಲ ಅನ್ನೋದು ತನಿಖೆ ವೇಳೆ ಪತ್ತೆಯಾಗಿದೆ. ಸಭೆ ನಡೆಸಿ ಸರಿಯಾದ ಪ್ಲಾನಿಂಗ್ ಇಲ್ಲದೆ ನಿರ್ಧಾರ ತೆಗೆದುಕೊಂಡಿರೋದು ಮತ್ತು ಟಿಕೆಟ್ ಬಗ್ಗೆ ಗೊಂದಲ, ಟ್ವೀಟ್, ಸುಳ್ಳು ವದಂತಿಯಿಂದ ಜನ ಸೇರಿ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಆರ್ಸಿಬಿ ಟಿಕೆಟ್ ಬಗ್ಗೆ ಗೊಂದಲ ಹುಟ್ಟಿಸಿತ್ತು. ಇದು ಘಟನೆಗೆ ಮೊದಲ ಕಾರಣ. ಜೊತೆಗೆ ಡಿಎನ್ಎ ಕಡೆಯಿಂದ ಯಾವುದೇ ಸೆಕ್ಯುರಿಟಿ ಪ್ಲಾನ್ ಇರಲಿಲ್ಲ. ಖಾಸಗಿ ಸೆಕ್ಯುರಿಟಿ ಏಜೆನ್ಸಿ ಬಳಕೆಯಲ್ಲಿ ವಿಫಲವಾಗಿದೆ. ಪೊಲೀಸರ ಜೊತೆ ಕೂಡ ಸರಿಯಾದ ಮಾತುಕತೆ ನಡೆಸದೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಿಐಡಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ.
ಎಲ್ಲಾ ಗೇಟ್ ಬಳಿಯ ಸಿಸಿಟಿವಿ ಪರಿಶೀಲನೆ, ವಿಡಿಯೋದಲ್ಲಿದ್ದವರ ಹೇಳಿಕೆ, ಗಾಯಾಳು ಹೇಳಿಕೆ, ಗಾಯಾಳುಗಳನ್ನ ಸಾಗಿಸಿದವರ ಹೇಳಿಕೆ, ಪ್ರತಿ ಗೇಟ್ನ ಸೆಕ್ಯುರಿಟಿ, ಡ್ಯೂಟಿಗೆ ಹಾಜರಾಗಿದ್ದ ಪೊಲೀಸರ ಹೇಳಿಕೆಗಳನ್ನು ಸೇರಿ ನೂರಾರು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿದೆ.
































