ಪೊಲೀಸರೊಬ್ಬರ ಖಾತೆಗೆನೇ ಸೈಬರ್ ಖದೀಮರು ಕನ್ನ ಹಾಕಿದ ಘಟನೆ ಮುಂಬೈನಲ್ಲಿ ನಡೆದಿದೆ. ಮಹಾರಾಷ್ಟ್ರ ರಾಜ್ಯಪಾಲರ ಅಧಿಕೃತ ನಿವಾಸ ‘ರಾಜ ಭವನ’ದಲ್ಲಿನ ಪೊಲೀಸ್ ಇನ್ಸ್ಪೆಕ್ಟರ್ ಗೆ ಸೈಬರ್ ಕಳ್ಳರು 3 ಲಕ್ಷ ರೂ ವಂಚಿಸಿದ್ದಾರೆ.
ದಕ್ಷಿಣ ಮುಂಬೈನಲ್ಲಿರುವ ರಾಜ ಭವನದ ಪೊಲೀಸ್ ಇನ್ಸ್ಪೆಕ್ಟರ್ ಅವರಿಗೆ ಫಿಶಿಂಗ್ ಮೂಲಕ ಸೈಬರ್ ಕಳ್ಳರು 3 ಲಕ್ಷ ರೂ ವಂಚಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ಮಾಹಿತಿ ನೀಡಿದ್ದಾರೆ.
ಫಿಶಿಂಗ್ ಎನ್ನುವುದು ಇಮೇಲ್, ಪಠ್ಯ ಸಂದೇಶಗಳು, ಫೋನ್ ಕರೆಗಳು ಅಥವಾ ದುರುದ್ದೇಶಪೂರಿತ ಲಿಂಕ್ಗಳ ಮೂಲಕ ವ್ಯಕ್ತಿಗಳ ಮೇಲೆ ನಡೆಸುವ ಸೈಬರ್ ದಾಳಿಯಾಗಿದೆ. ಇದರಿಂದ ವೈಯಕ್ತಿಕ ಮತ್ತು ಆರ್ಥಿಕ ವಿವರಗಳು ಶೇರ್ ಆಗುತ್ತವೆ. ಈ ಮೂಲಕ ಸೈಬರ್ ಖದೀಮರು ಮೋಸ ಮಾಡುತ್ತಾರೆ.
ಸೋಮವಾರದಿಂದ ಶನಿವಾರದ ನಡುವೆ ಈ ಘಟನೆ ನಡೆದಿದೆ ಎಂದು ಟಾರ್ಡಿಯೊ ಪೊಲೀಸ್ ಕಾಲೋನಿಯಲ್ಲಿ ವಾಸಿಸುವ ಪೊಲೀಸ್ ಇನ್ಸ್ಪೆಕ್ಟರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡಿ ಹಣ ಕಳಕೊಂಡು ಇನ್ಸ್ಪೆಕ್ಟರ್: ಇನ್ಸ್ಪೆಕ್ಟರ್ಗೆ RTO ಚಲನ್ಗಳ ಬಗ್ಗೆ ವಾಟ್ಸಾಪ್ ಗ್ರೂಪ್ ನಲ್ಲಿ ಸಂದೇಶ ಬಂದಿತ್ತು. ಅವರು ಆ ಲಿಂಕ್ ಅನ್ನು ಕ್ಲಿಕ್ ಮಾಡಿ ತಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ದಾಖಲಿಸಿದ್ದರು. ಸ್ವಲ್ಪ ಸಮಯದ ನಂತರ ಅನುಮಾನ ಬಂದು ಆ ಲಿಂಕ್ ಅನ್ನು ಅವರು ಡಿಲಿಟ್ ಮಾಡಿದ್ದಾರೆ. ಆದರೆ ಅವರ ವಿವರಗಳನ್ನು ಅನಧಿಕೃತವಾಗಿ ಪಡೆದ ಖದೀಮರು ಡೇಟಾವನ್ನು ದುರುಪಯೋಗಪಡಿಸಿಕೊಂಡು ಮೂರು ದಿನಗಳ ನಂತರ ಇನ್ಸ್ಪೆಕ್ಟರ್ ಬ್ಯಾಂಕ್ ಖಾತೆಯಿಂದ 3 ರೂ. ಗಳನ್ನು ಎಗರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಬ್ಯಾಂಕ್ ಖಾತೆಯಿಂದ ಹಣ ವಿತ್ ಡ್ರಾ ಆದ ಬಗ್ಗೆ ಸಂದೇಶ ಬಂದಾಗ ಎಚ್ಚೆತ್ತ ಪೊಲೀಸ್ ಇನ್ಸ್ಪೆಕ್ಟರ್ ತಕ್ಷಣವೇ ಸೈಬರ್ ಸಹಾಯವಾಣಿ 1930 ಗೆ ಮಾಹಿತಿ ನೀಡಿದರು. ಬಳಿಕ ವಂಚನೆಗೆ ಒಳಗಾಗಿರುವ ಬಗ್ಗೆ ಟಾರ್ಡಿಯೊ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನಧಿಕೃತ ಲಿಂಕ್ ಕ್ಲಿಕ್ ಮಾಡುವ ಮುನ್ನ ಎಚ್ಚರವಿರಿ
ಇತ್ತೀಚೆಗೆ ಡಿಜಿಟಲ್ ಅರೆಸ್ಟ್ ಸೇರಿದಂತೆ ಹಲವು ರೀತಿಯಲ್ಲಿ ಸೈಬರ್ ಖದೀಮರು ಜನರಿಗೆ ಮೋಸ ಮಾಡುತ್ತಿದ್ದಾರೆ. ವಾಟ್ಸಾಪ್, ಸಾಮಾನ್ಯವಾಗಿ ಸಂದೇಶಗಳಲ್ಲಿ ಬರುವ ಅನಧಿಕೃತ ಲಿಂಕ್ ಕ್ಲಿಕ್ ಮಾಡುವ ಮುನ್ನ ಜನರು ಎಚ್ಚರದಿಂದ ಇರಬೇಕು. ಇಲ್ಲದಿದ್ದರೆ ಸೈಬರ್ ಕಳ್ಳರು, ಆ ಮೂಲಕ ನಮ್ಮ ಡಾಟಾ ಕದ್ದು ವಂಚನೆ ಎಸಗುತ್ತಾರೆ.