ಮುಂಬಯಿ: ವಿಶ್ವದ ಆಟೋಮೊಬೈಲ್ ಕ್ಷೇತ್ರದ ದಿಗ್ಗಜ,ಎಲೆಕ್ಟಿಕ್ ಕಾರು ತಯಾರಕ ಸಂಸ್ಥೆಯಾದ ಟೆಸ್ಲಾ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಮುಂಬಯಿಯ ಬಾಂದ್ರಾ-ಕುರ್ಲಾ ಸಂಕೀರ್ಣದಲ್ಲಿ ತನ್ನ ಮೊದಲ ಎಕ್ಷೀರಿಯನ್ಸ್ ಸೆಂಟರ್ ಮಂಗಳವಾರ ಉದ್ಘಾಟನೆಗೊಂಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರವು ದೇಶದಲ್ಲೇ ಅತಿ ದೊಡ್ಡ ಎಲೆಕ್ಟಿಕ್ ವಾಹನ (ಇವಿ) ಉತ್ಪಾದನಾ ಸಾಮರ್ಥ್ಯ ಹೊಂದಿರುವ ರಾಜ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಶ್ವದ ಅತ್ಯಂತ ಸ್ಮಾರ್ಟ್ ಕಾರು ಭಾರತಕ್ಕೆ, ಅದರಲ್ಲೂ ವಿಶೇಷವಾಗಿ ಮುಂಬಯಿಗೆ ಬರುತ್ತಿರುವುದು ಸಂತೋಷದ ವಿಷಯ. ಟೆಸ್ಲಾ ತನ್ನ ಎಕ್ಸಿರಿಯನ್ಸ್ ಸೆಂಟರ್ ಮೂಲಕ ಮಹಾರಾಷ್ಟ್ರದಿಂದ ಭಾರತಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡುತ್ತಿದೆ ಎಂದು ಫಡ್ನವೀಸ್ ಘೋಷಿಸಿದರು.
ಕೇವಲ 15 ನಿಮಿಷಗಳಲ್ಲಿ ಚಾರ್ಜ್:
ಮುಂಬಯಿಯಲ್ಲಿ ಈಗ ಟೆಸ್ಲಾ ಕಾರುಗಳ ಬುಕಿಂಗ್ ಸಹ ಪ್ರಾರಂಭವಾಗಿದೆ. ಟೆಸ್ಲಾ ಕಂಪೆನಿಯ ವಿಶ್ವ ಪ್ರಸಿದ್ಧ ವೈ ಮಾದರಿ ಭಾರತದಲ್ಲಿ ಬಿಡುಗಡೆಯಾಗಿದ್ದು, ಈ ಕಾರನ್ನು ಕೇವಲ 15 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದು.
ಒಂದೇ ಚಾರ್ಜ್‌ನಲ್ಲಿ 600 ಕಿ.ಮೀ.ವರೆಗೆ ಓಡಬಲ್ಲ ಈ ಕಾರು ಮಾಲಿನ್ಯ ರಹಿತವಾಗಿದ್ದು, ಇದರ ಸುರಕ್ಷತಾ ವೈಶಿಷ್ಟ್ಯಗಳನ್ನು ವಿಶ್ವದಲ್ಲೇ ಅತ್ಯುತ್ತಮ ಎಂದು ಪರಿಗಣಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಭಾರತದಲ್ಲಿ ಕಾರಿನ ಬೆಲೆ ಎಷ್ಟು?
ಟೆಸ್ಲಾ ಕಂಪೆನಿಯು ಭಾರತದಲ್ಲಿ ಎರಡು ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಟೆಸ್ಲಾ ವೈ ಮಾದರಿಯ ಕಾರಿನ ಬೆಲೆಯು 60 ಲಕ್ಷ ರೂಪಾಯಿಯಿಂದ ಆರಂಭವಾಗಲಿದ್ದು, ಮತ್ತೊಂದು ಮಾದರಿಯಾದ ಲಾಂಗ್ ರೇಂಜ್ ವೇರಿಯಂಟ್ ಕಾರಿನ ಮೌಲ್ಯವು 67.8 ಲಕ್ಷ ರೂಪಾಯಿಯ ನಿಗದಿಪಡಿಸಿದೆ. ಪ್ರಸ್ತುತ ಅಮೆರಿಕದಲ್ಲಿ ವೈ ಮಾದರಿಯ ಲಾಂಗ್ ರೇಂಜ್ ಆಲ್ ವೀಲ್ ಡ್ರೈವ್ ಕಾರುಗಳು 35.69 ಲಕ್ಷ ರೂ. ಹಾಗೂ ರೇರ್ ವೀಲ್ ಡ್ರೈವ್ ಕಾರುಗಳು 32.25 ಲಕ್ಷ ರೂ.ಗೆ ಮಾರಾಟವಾಗುತ್ತಿದೆ.
32 ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ:
ಎಲೆಕ್ಟಿಕ್ ವಾಹನಗಳನ್ನು ಉತ್ತೇಜಿಸಲು ರಾಜ್ಯ ಸರಕಾರವು ಅತ್ಯಂತ ಕ್ರಿಯಾತ್ಮಕ ನೀತಿಯನ್ನು ಜಾರಿಗೆ ತಂದಿದೆ. ಇದು ಚಾರ್ಜಿಂಗ್ ಮೂಲಸೌಕರ್ಯ, ತೆರಿಗೆ ರಿಯಾಯಿತಿಗಳು ಮತ್ತು ಉತ್ಪಾದನೆಗೆ ವಿಶೇಷ ಪ್ರೋತ್ಸಾಹಗಳನ್ನು ಒಳಗೊಂಡಿದೆ. ಮುಂಬಯಿಯ ಅನಂತರ ಟೆಸ್ಲಾ ತನ್ನ ಸೇವೆಗಳನ್ನು ಭಾರತದ ಇನ್ನೂ ಎರಡು ನಗರಗಳಿಗೆ ವಿಸ್ತರಿಸುವ ಯೋಜನೆಯನ್ನು ಹೊಂದಿದೆ. ಮುಂಬಯಿಯಲ್ಲಿ ಈಗಾಗಲೇ ನಾಲ್ಕು ಪ್ರಮುಖ ಚಾರ್ಜಿಂಗ್ ಹಬ್‌ಗಳು ಮತ್ತು 32 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.