ಬೆಂಗಳೂರು : ಪ್ರಜ್ವಲ್ ರೇವಣ್ಣ ಪ್ರಕರಣವನ್ನು ತನಿಖೆ ನಡೆಸಿದ ವಿಶೇಷ ತನಿಖಾ ತಂಡಕ್ಕೆ ಸಿಎಂ ಪದಕ ನೀಡುತ್ತೇವೆ. ರಾಷ್ಟ್ರಪತಿ ಪದಕಕ್ಕೂ ಶಿಫಾರಸು ಮಾಡ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಮೊದಲಿಂದಲೂ ಅಚ್ಚುಕಟ್ಟಾಗಿ ತನಿಖೆ ಮಾಡಿದ್ದಾರೆ. ಮೊದಲು ಎಸ್‌ಐಟಿಗೆ ಅಭಿನಂದನೆ ಹೇಳ್ತೇನೆ, ಇದು ಐತಿಹಾಸಿಕ ತೀರ್ಪು. ನ್ಯಾಯಾಲಯಕ್ಕೆ ನಮ್ಮ ಎಸ್‌ಐಟಿ ಎಲ್ಲಾ ದಾಖಲೆಯನ್ನು ಕೊಟ್ಟಿತ್ತು ಪೊಲೀಸರು ಬೇಗ ತನಿಖೆ ಮುಗಿಸಿದ್ದಾರೆ, ಅಭಿನಂದನೆ ಸಲ್ಲಿಸುತ್ತೇನೆ. ಪ್ರಜ್ವಲ್ ರೇವಣ್ಣ ಕೇಸನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು. ಪೊಲೀಸರ ಶ್ರಮಕ್ಕೆ ಸರ್ಕಾರ ಪ್ರಶಂಸೆ ಮಾಡುತ್ತೆ ಎಂದು ಹೇಳಿದರು.
ಕೆ.ಆರ್ ನಗರದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಇನ್ನು ಜಡ್ಜ್ ಗಜಾನನ ಭಟ್ ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡಿರುವುದು ಹೊಸ ದಾಖಲೆಯಾಗಿದೆ.