ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ(ಇಡಿ)ದ ನೋಟಿಸ್ ಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಸೋಮವಾರ ವಿಸ್ತರಿಸಿದೆ.
ಇಡಿ ಸಮನ್ಸ್ ರದ್ದು ಕೋರಿ ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿದೆ. ಹೀಗಾಗಿ ಫೆ. 20ರ ರವರೆಗೆ ಇಡಿ ಸಮನ್ಸ್ ಗೆ ತಡೆಯಾಜ್ಞೆ ವಿಸ್ತರಣೆಯಾಗಿದೆ. ಇದರಿಂದ ಸಿಎಂ ಪತ್ನಿ ಹಾಗೂ ಬೈರತಿ ಸುರೇಶ್ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಇಡಿ ನೋಟಿಸ್ ನೀಡುತ್ತಿದ್ದಂತೆ ಪಾರ್ವತಿ ಸಿದ್ದರಾಮಯ್ಯ ಮತ್ತು ಬೈರತಿ ಸುರೇಶ್ ಅವರು ಇಡಿ ಸಮನ್ಸ್ ಪ್ರಶ್ನಿಸಿ ಧಾರವಾಡ ಏಕಸದಸ್ಯ ಪೀಠಕ್ಕೆ ಎರಡು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಫೆಬ್ರವರಿ 10ರ ವರೆಗೆ ಇಡಿ ನೀಡಿದ್ದ ಸಮನ್ಸ್‌ಗೆ ತಡೆ ನೀಡಿದ್ದರು. ಇದೀಗ ಮತ್ತೆ ಫೆಬ್ರವರಿ 20 ರವರೆಗೆ ತಡೆಯಾಜ್ಞೆಯನ್ನು ವಿಸ್ತರಿಸಲಾಗಿದೆ.
ಇಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಅವರು, ಇಡಿ ಸಮನ್ಸ್ ಜಾರಿಗೊಳಿಸಿದಾಗ ಹೈಕೋರ್ಟ್ ಮಧ್ಯಪ್ರವೇಶ ಮಾಡಬಾರದು. ಈ ಬಗ್ಗೆ ಸುಪ್ರೀಂಕೋರ್ಟ್ ನ ಇತ್ತೀಚಿನ ತೀರ್ಪು ಇದೆ ಎಂದರು.
ಸಚಿವ ಬೈರತಿ ಸುರೇಶ್ ಪರ ವಾದ ಮಂಡಿಸಿದ ವಕೀಲ ಸಿ.ವಿ.ನಾಗೇಶ್, ಇಡಿ ತನಿಖಾಧಿಕಾರಿಗಳು ನಮೂನೆಯೊಂದನ್ನು ಕಳುಹಿಸಿದ್ದಾರೆ. ಇದರಲ್ಲಿ ಬೈರತಿ ಕುಟುಂಬದವರು, ಉದ್ಯೋಗಿಗಳು ಇತರರ ವಿವರ ಕೇಳಿದ್ದಾರೆ. ಇದು ಅವರ ಖಾಸಗಿತನದ ಸ್ಪಷ್ಟ ಉಲ್ಲಂಘನೆ.14 ಸೈಟ್ ಹಂಚಿಕೆಗೂ ಬೈರತಿ ಸುರೇಶ್ ಗೂ ಸಂಬಂಧವಿಲ್ಲ. ಮುಡಾದಲ್ಲಿ ಬೈರತಿ ಸುರೇಶ್ ಯಾವುದೇ ಹುದ್ದೆ ವಹಿಸಿಕೊಂಡಿಲ್ಲ. ಹೀಗಾಗಿ ಇಡಿ ಸಮನ್ಸ್ ಕಾನೂನುಬಾಹಿರವೆಂದು ಮನವಿ ಮಾಡಿದರು.