ಪೋರ್ಬಂದರ್ : ಗುಜರಾತಿನ ಪೋರ್ಬಂದರ್ನಿಂದ ಇರಾನ್ ಬಂದರ್ ಅಬ್ಬಾಸ್ ಬಂದರಿನತ್ತ ಸಾಗುತ್ತಿದ್ದ ವಾಣಿಜ್ಯ ಹಡಗು ಮುಳುಗಿ ಅಪಾಯಕ್ಕೆ ಸಿಲುಕಿದ್ದ 12 ಭಾರತೀಯ ಸಿಬ್ಬಂದಿಯನ್ನು ಭಾರತೀಯ ಕರಾವಳಿ ಪಡೆ (ಐಸಿಜಿ) ರಕ್ಷಣೆ ಮಾಡಿದೆ ಎಂದು ಅಧಿಕಾರಿಗಳು ಇಂದು ಮಾಹಿತಿ ನೀಡಿದ್ದಾರೆ.
ಉತ್ತರ ಅರಬ್ಬಿ ಸಮುದ್ರದಲ್ಲಿ ಭಾರತದ ಸಾಗರ ವ್ಯಾಪ್ತಿಯ ಹೊರಗೆ ಪಾಕಿಸ್ತಾನದ ಸಾಗರ ವಲಯದಲ್ಲಿ ‘ಎಂಎಸ್ವಿ ಅಲ್ ಪಿರನ್ಪಿರ್’ ಎಂಬ ಹಡಗು ಮುಳುಗಡೆಯಾಗಿತ್ತು. ನಂತರ ಪಾಕಿಸ್ತಾನದ ಸಾಗರ ಭದ್ರತಾ ಪಡೆ (ಪಿಎಂಎಸ್ಎ) ಸಹಯೋಗದಲ್ಲಿ ಭಾರತೀಯ ಕರಾವಳಿ ಪಡೆ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿ 12 ಭಾರತೀಯರನ್ನು ರಕ್ಷಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಭಾರತೀಯ ಕರಾವಳಿ ಪಡೆ, ಡಿಸೆಂಬರ್ ೪ರಂದು ಹಡಗು ಮುಳುಗಡೆಗೊಂಡಿತು. ಭಾರತೀಯ ಕರಾವಳಿ ಪಡೆಯ ‘ಸಾರ್ತಕ್’ ಹಡಗಿನ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಮಾನವೀಯ ನೆಲೆಯಲ್ಲಿ ಹುಡುಕಾಟ ಮತ್ತು ಕಾರ್ಯಾಚರಣೆಯ ಉದ್ದಕ್ಕೂ ಎರಡೂ ದೇಶಗಳ ಸಾಗರ ರಕ್ಷಣೆ ಸಮನ್ವಯ ಕೇಂದ್ರ (ಎಂಆರ್ಸಿಸಿ) ನಿಕಟ ಸಮನ್ವಯವನ್ನು ಸಾಧಿಸಿತು ಎಂದು ತಿಳಿಸಿದೆ.
ಡಿಸೆಂಬರ್ 2ರಂದು ವಾಣಿಜ್ಯ ಹಡಗು ಸರಕುಗಳೊಂದಿಗೆ ಪೋರ್ಬಂದರ್ನಿಂದ ಇರಾನ್ನತ್ತ ಹೊರಟಿತ್ತು. ಸಾಗರದ ಪ್ರಕ್ಷುಬ್ಧತೆ ಮತ್ತು ಪ್ರವಾಹಕ್ಕೆ ಸಿಲುಕಿ ಹಡಗು ಬುಧವಾರ ಬೆಳಿಗ್ಗೆ ಮುಳುಗಡೆಗೊಂಡಿತು. ಎಲ್ಲ ಸಿಬ್ಬಂದಿ ಆರೋಗ್ಯವಾಗಿದ್ದಾರೆ ಎಂದು ಐಸಿಜಿ ಪ್ರಕಟಣೆ ಹೇಳಿದೆ. ಇನ್ನು ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಸಾಗರ ಭದ್ರತಾ ಪಡೆಯ ವಿಮಾನ ಹಾಗೂ ಎಂವಿ ಕಾಸ್ಕೋ ಗ್ಲೋರಿ ಹಡಗು ನೆರವಾಯಿತು.