ಮಂಗಳೂರು; ಕೇರಳದ ಚಿನ್ನದ ವ್ಯಾಪಾರಿಯನ್ನು ಅಪಹರಿಸಿ ದರೋಡೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೇರಳದ ಚಿನ್ನದ ವ್ಯಾಪಾರಿ ಶ್ರೀಹರಿ ದರೋಡೆಗೆ ಒಳಗಾದವರು.
ಅಪಹರಿಸಿ ದರೋಡೆ ಮಾಡಿದ ನಂತರ ಅವರನ್ನು ದರೋಡೆಕೋರರು ಅವರನ್ನು ಶಿರಸಿಯಲ್ಲಿ ಬಿಟ್ಟುಕಳುಹಿಸಿದ್ದಾರೆ. ಶ್ರೀಹರಿಯವರು ಪೊಲೀಸರಲ್ಲಿ ದೂರು ದಾಖಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಶ್ರೀಹರಿ ಅವರು ಬುಧವಾರ ಬೆಳಗ್ಗೆ 7 ಗಂಟೆ ಸುಮಾರಿಗೆ 350 ಗ್ರಾಂ ಚಿನ್ನದ ಗಟ್ಟಿಯನ್ನು ಹಿಡಿದುಕೊಂಡು ರೈಲಿನ ಮೂಲಕ ಕೇರಳದಿಂದ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ರೈಲು ನಿಲ್ದಾಣದಿಂದ ಹೊರಬಂದು ಕೈರಲಿ ಹೋಟೆಲ್ ಬಳಿ ಆಟೋಗೆ ಕಾಯುತ್ತಿದ್ದಾಗ ಇನೋವಾ ಕಾರಿನಲ್ಲಿ ಆಗಮಿಸಿದ ತಂಡ ಶ್ರೀಹರಿ ಅವರ ಬಳಿ ನಾವು ಕಸ್ಟಮ್ಸ… ಅಧಿಕಾರಿಗಳು, ನಿಮ್ಮನ್ನು ಪರಿಶೀಲನೆ ಮಾಡಲು ಬಂದಿದ್ದೇವೆ. ಕಾರಿನಲ್ಲಿ ಕುಳಿತುಕೊಳ್ಳಿ ಎಂದು ಗದರಿಸಿದ್ದಾರೆ.
ಇದಕ್ಕೆ ಚಿನ್ನದ ವ್ಯಾಪಾರಿ ಒಪ್ಪದಿದ್ದಾಗ ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿ ಕರೆದೊಯ್ದಿದ್ದಾರೆ. ಉಡುಪಿ ಮೂಲಕ ಕುಮಟಾ ಶಿರಸಿಗೆ ಕರೆದುಕೊಂಡು ಹೋಗಿ ಸುಮಾರು 35 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನದ ಗಟ್ಟಿ ದರೋಡೆ ಮಾಡಿದ್ದಾರೆ. ಬಳಿಕ ಚಿನ್ನದ ವ್ಯಾಪಾರಿಯನ್ನು ಶಿರಸಿಯ ಅಂತ್ರವಳ್ಳಿ ಎಂಬ ಊರಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಘಟನೆಯಿಂದ ಆಘಾತಕ್ಕೊಳಗಾದ ಚಿನ್ನದ ವ್ಯಾಪಾರಿ ಬಳಿಕ ಮಂಗಳೂರಿಗೆ ಬಂದು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.