ಬೆಂಗಳೂರು: ನಮ್ಮ ಕಾನೂನು, ಸಂವಿಧಾನದಲ್ಲಿ ಡಿಜಿಟಲ್ ಅರೆಸ್ಟ್ ಎನ್ನುವ ವಿಧಾನವೇ ಇಲ್ಲ. ಮಹಾರಾಷ್ಟ್ರ, ಮುಂಬೈ ಆಗಲಿ ಯಾವುದೇ ತನಿಖಾ ಸಂಸ್ಥೆಯಾಗಲಿ ಡಿಜಿಟಲ್ ಅರೆಸ್ಟ್ ಮಾಡುವುದಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ. ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣಗಳಿಂದ ಅಮಾಯಕರು ಹಣ ಕಳೆದುಕೊಳ್ಳುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು ಡಿಜಿಟಲ್ ಅರೆಸ್ಟ್ ಬೆದರಿಕೆಯ ಕರೆಗಳ ಕುರಿತು ಸಾಮಾನ್ಯ ಜ್ಞಾನವಿರಲಿ ಎಂದು ಕರೆ ನೀಡಿದರು. ನಮ್ಮ ಕಾನೂನಿನ ಪ್ರಕಾರ ಯಾವುದೇ ವ್ಯಕ್ತಿಗೆ ನೋಟಿಸ್ ನೀಡಿ ಅಥವಾ ನೇರವಾಗಿ ಭೇಟಿಯಾಗಿ ವಶಕ್ಕೆ ಪಡೆದು ಬಂಧಿಸುವ ಪದ್ಧತಿಯಿದೆ.ಮತ್ತು ಹಾಗೆ ಬಂಧಿಸಿದ ಆರೋಪಿಯನ್ನ 24 ಗಂಟೆಗಳೊಳಗಾಗಿ ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕು ಎಂಬ ಕಠಿಣವಾದ ಕಾನೂನಿದೆ. ಡಿಜಿಟಲ್ ಅರೆಸ್ಟ್ ಎಂಬ ಪದ್ಧತಿಯೇ ಇಲ್ಲ, ಸಾರ್ವಜನಿಕರು ಸ್ವಲ್ಪ ಮಟ್ಟಿಗಿನ ಕಾನೂನಿನ ಅರಿವು ಹೊಂದಿದ್ದರೆ ಈ ರೀತಿಯ ವಂಚಕರ ಜಾಲದಲ್ಲಿ ಸಿಲುಕಿಕೊಳ್ಳುವ ಪ್ರಮೇಯವಿರುವುದಿಲ್ಲ. ಅಂತಹ ಕರೆಗಳು ಬಂದಾಗ ಸಮೀಪದ ಪೊಲೀಸ್ ಠಾಣೆಗೆ ಒಂದು ಕರೆ ಮಾಡಿದರೂ ಸಹ ಸೂಕ್ತ ಮಾಹಿತಿ ನೀಡಲಾಗುತ್ತದೆ ಎಂದು ಆಯುಕ್ತರು ತಿಳಿಸಿದರು. ಇತ್ತೀಚಿಗೆ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರನ್ನ 1 ತಿಂಗಳ ಕಾಲ ಡಿಜಿಟಲ್ ಅರೆಸ್ಟ್ ಜಾಲದಲ್ಲಿ ಬೀಳಿಸಿದ ವಂಚಕರು ಬರೋಬ್ಬರಿ 11.83 ಕೋಟಿ ರೂ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿತ್ತು.
