ಚಿತ್ರದುರ್ಗ : ಸ್ಪರ್ಧೆ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ. ಹಾಗಾಗಿ ಶಾಲಾ ದಿನಗಳಲ್ಲಿ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಬೇಕೆಂದು ಸಿ.ಆರ್.ಪಿ.ಅಜಯ್ ತಿಳಿಸಿದರು.
ತರಳಬಾಳು ಪದವಿಪೂರ್ವ ಕಾಲೇಜು, ಹಿರಿಯ ಪ್ರಾಥಮಿಕ ಶಾಲೆ ಚಿತ್ರದುರ್ಗ ವಲಯ ಮಟ್ಟದ ತರಳಬಾಳು ಕ್ರೀಡಾ ಮೇಳವನ್ನು ಶುಕ್ರವಾರ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವಂತರಾಗಿರಬಹುದು. ಸೋಲು-ಗೆಲುವು ಎನ್ನುವುದಕ್ಕಿಂತ ಮುಖ್ಯವಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ. ಜೀವನದಲ್ಲಿ ಸಾಧನೆ ಇರಬೇಕು. ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕಾದರೆ ಪ್ರಾಥಮಿಕ ಹಂತದಿಂದಲೆ ಕಠಿಣ ಪರಿಶ್ರಮವಿರಬೇಕು. ಶಿಕ್ಷಣದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕೆಂದು ಕ್ರೀಡಾಪಟುಗಳಿಗೆ ಕರೆ ನೀಡಿದರು.
ಅತಿ ಕಿರಿಯ ವಯಸ್ಸಿನ ಹದಿನೆಂಟು ವರ್ಷದ ಗುಕೇಶ್ ಚೆಸ್ನಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಭಾರತ ವಿಶ್ವಕ್ಕೆ ಗುರುವಾಗಬೇಕೆಂದು ನಮ್ಮ ದೇಶದ ಪ್ರಧಾನಿ ಕನಸು ಕಂಡಿದ್ದಾರೆ. ಹಾಗಾಗಿ ನೀವುಗಳು ವಿಶ್ವ ಚಾಂಪಿಯನ್ ಆಗಲು ಈಗಿನಿಂದಲೇ ಪ್ರಯತ್ನಿಸುವಂತೆ ಕ್ರೀಡಾಪಟುಗಳಲ್ಲಿ ಮನವಿ ಮಾಡಿದರು.
ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ ಸಲಹಾ ಸಮಿತಿ ಸದಸ್ಯ ದ್ಯಾಮಣ್ಣ ಎಚ್.ಎಂ. ಮಾತನಾಡಿ ಸೋಲು-ಗೆಲುವಿಗಿಂತ ಕ್ರೀಡೆಯಲ್ಲಿ ಮಕ್ಕಳು ಭಾಗವಹಿಸುವುದು ಮುಖ್ಯ. ಗೆದ್ದವರು ಹಿಗ್ಗದೆ, ಸೋತವರು ಕುಗ್ಗದೆ ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು. ಶಿಕ್ಷಣದ ಜೊತೆ ಮಕ್ಕಳಿಗೆ ಚಿಕ್ಕಂದಿನಿಂದಲೆ ಗುರು-ಹಿರಿಯರು, ಪೋಷಕರುಗಳನ್ನು ಗೌರವಿಸುವ ಸಂಸ್ಕøತಿ, ಸಂಸ್ಕಾರ ಕಲಿಸಬೇಕು. ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕವಾಗಿ ಲವಲವಿಕೆಯಿಂದ ಇರಬಹುದು ಎಂದು ಹೇಳಿದರು.
ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ ಸಲಹಾ ಸಮಿತಿ ಉಪಾಧ್ಯಕ್ಷ ಬಸಪ್ಪ ಮಾತನಾಡುತ್ತ ಪಠ್ಯದ ಜೊತೆಯಲ್ಲಿ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳು ಅತ್ಯವಶ್ಯಕ. ಮಾನಸಿಕ ಹಾಗೂ ದೈಹಿಕವಾಗಿ ಮಕ್ಕಳು ಸದೃಢರಾಗಿರಬೇಕಾದರೆ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಪ್ರತಿಯೊಬ್ಬ ಕ್ರೀಡಾಪಟುವಿಗೂ ಗೆಲ್ಲಬೇಕೆಂಬ ಆಸೆಯಿರುತ್ತದೆ. ಆದರೆ ಎಲ್ಲರೂ ಗೆಲ್ಲುವುದು ಕಷ್ಟ. ಸೋತವರು ಮುಂದೆ ಗೆಲುವಿಗೆ ಪ್ರಯತ್ನಿಸಬೇಕೆಂದು ತಿಳಿಸಿದರು.
ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆಯ ಸಲಹಾ ಸಮಿತಿ ಕಾರ್ಯದರ್ಶಿ ಪ್ರಕಾಶ್ ಎಸ್. ಸದಸ್ಯರುಗಳಾದ ಮಹೇಶ್ವರಪ್ಪ ಆರ್. ನಂದಿ ನಾಗರಾಜ್, ರುದ್ರಪ್ಪ ಕೆ.ಟಿ. ತರಳಬಾಳು ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಏಕಾಂತಪ್ಪ, ಮುಖ್ಯ ಶಿಕ್ಷಕಿ ಶಿವಮ್ಮ ಇವರುಗಳು ವೇದಿಕೆಯಲ್ಲಿದ್ದರು.