ದಾವಣಗೆರೆ: ರಾಜ್ಯ ಲೋಕಸೇವಾ ಆಯೋಗದಿಂದ ವಿವಿಧ ಇಲಾಖೆಗಳಲ್ಲಿನ ಗ್ರೂಪ್ ಬಿ ಹುದ್ದೆಗಳ ಆಯ್ಕೆಗೆ ಸ್ಪರ್ಧಾತ್ಮಕ ಪರೀಕ್ಷೆಯು ಜನವರಿ 19 ಮತ್ತು 25 ರಂದು ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ತಿಳಿಸಿದರು.
ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರೀಕ್ಷಾ ಪೂರ್ವ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನವರಿ 19 ರಂದು ಬೆಳಗ್ಗೆ 10 ರಿಂದ 11.30 ರವರೆಗೆ ಸಾಮಾನ್ಯ ಪತ್ರಿಕೆ 1 ರ ಪರೀಕ್ಷೆ ನಡೆಯಲಿದ್ದು ದಾವಣಗೆರೆ ನಗರದ 6 ಕೇಂದ್ರಗಳಲ್ಲಿ 3422 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮತ್ತು ಜನವರಿ 25 ರಂದು ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ ಸಾಮಾನ್ಯ ಪತ್ರಿಕೆ 2 ರ ಪರೀಕ್ಷೆ 6 ಕೇಂದ್ರಗಳಲ್ಲಿ ನಡೆಯಲಿದ್ದು 2912 ಅಭ್ಯರ್ಥಿಗಳು ಪರೀಕ್ಷೆ ಬರೆಯುವರು.
ಎಲ್ಲಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು. ಪರೀಕ್ಷಾ ಕೇಂದ್ರದೊಳಗೆ ಯಾವುದೇ ಅಭ್ಯರ್ಥಿಗಳು ಪೇಪರ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತರುವಂತಿಲ್ಲ, ವಸ್ತ್ರ ಸಂಹಿತೆಯನ್ನು ಎಲ್ಲಾ ಅಭ್ಯರ್ಥಿಗಳು ಪಾಲನೆ ಮಾಡಬೇಕೆಂದು ತಿಳಿಸಿ ಒಂದು ಭಾರಿ ಕೇಂದ್ರದೊಳಗೆ ತಪಾಸಣೆ ಮಾಡಿದ ನಂತರ ಕೊಠಡಿಗೆ ಬಂದರೆ, ಪರೀಕ್ಷೆ ಮುಕ್ತಾಯದ ನಂತರವೇ ಹೊರಗೆ ಬಿಡಬೇಕೆಂದು ತಿಳಿಸಿದರು.
ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಹಾಗೂ ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.