ಬೆಂಗಳೂರು : ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಬಳಸಿದ ಪದದ ಹಿನ್ನೆಲೆಯಲ್ಲಿ ನಟ ಸುದೀಪ್ ವಿರುದ್ಧ ದೂರು ದಾಖಲಾಗಿದೆ. ರಣಹದ್ದುಗಳ ಕುರಿತು ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ಪಕ್ಷಿಪ್ರೇಮಿಗಳು ಹಾಗೂ ರಣಹದ್ದು ಸಂರಕ್ಷಣಾ ಟ್ರಸ್ಟ್ ವತಿಯಿಂದ ಬೆಂಗಳೂರು ದಕ್ಷಿಣ ವಿಭಾಗದ ಅರಣ್ಯಾಧಿಕಾರಿ (DFO) ರಾಮಕೃಷ್ಣಪ್ಪ ಅವರಿಗೆ ಅಧಿಕೃತ ದೂರು ಸಲ್ಲಿಸಲಾಗಿದೆ.
ಬಿಗ್‌ಬಾಸ್ ಶೋನಲ್ಲಿ ಮಾತನಾಡುವ ವೇಳೆ ನಟ ಸುದೀಪ್, ರಣಹದ್ದುಗಳು ಹೊಂಚು ಹಾಕಿ ಸರಿಯಾದ ಸಮಯಕ್ಕೆ ಬೇಟೆ ಹಿಡಿಯುತ್ತವೆ ಎಂಬರ್ಥದ ಹೇಳಿಕೆ ನೀಡಿದ್ದು, ಇದರಿಂದ ರಣಹದ್ದುಗಳ ಕುರಿತು ತಪ್ಪು ಸಂದೇಶ ಹರಡುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ರಣಹದ್ದುಗಳು ಸತ್ತ ಪ್ರಾಣಿಗಳ ಶವಗಳನ್ನು ಆಹಾರವಾಗಿ ಸೇವಿಸುವ ಪಕ್ಷಿಗಳಾಗಿದ್ದು, ಅವುಗಳ ಬಗ್ಗೆ ಈ ರೀತಿಯ ಹೇಳಿಕೆಗಳು ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡಿಸಬಹುದು ಎಂಬುದು ಪಕ್ಷಿಪ್ರೇಮಿಗಳ ವಾದವಾಗಿದೆ.
ರಣಹದ್ದು ಸಂರಕ್ಷಣಾ ಟ್ರಸ್ಟ್ ಹಾಗೂ ಪಕ್ಷಿಪ್ರೇಮಿಗಳು, ಜನಪ್ರಿಯ ಕಾರ್ಯಕ್ರಮವೊಂದರಲ್ಲಿ ಈ ರೀತಿಯ ಪದ ಬಳಕೆ ಅಸಮಂಜಸ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರಿಗೆ, ವಿಶೇಷವಾಗಿ ವೀಕ್ಷಕರಿಗೆ, ಹದ್ದುಗಳು ಮತ್ತು ರಣಹದ್ದುಗಳ ಕುರಿತು ಸರಿಯಾದ ಹಾಗೂ ವೈಜ್ಞಾನಿಕ ಮಾಹಿತಿ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿಗಳು ದೂರು ಪರಿಶೀಲನೆ ನಡೆಸಲಿದ್ದು, ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಜನಪ್ರಿಯ ಮಾಧ್ಯಮಗಳಲ್ಲಿ ಪ್ರಸಿದ್ಧ ವ್ಯಕ್ತಿಗಳು ಮಾತನಾಡುವಾಗ ಪರಿಸರ ಮತ್ತು ವನ್ಯಜೀವಿ ವಿಷಯಗಳಲ್ಲಿ ಹೆಚ್ಚು ಜಾಗರೂಕತೆ ವಹಿಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

































