ಚಿತ್ರದುರ್ಗ : ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೊಳಿಸದೆ ಗೊಂದಲ ಸೃಷ್ಟಿಸುತ್ತಿದೆ ಎಂದು ಸ್ವಾಭಿಮಾನಿ ಮಾದಿಗ ಮಹಾಸಭಾದ ಮೋಹನ್ಕುಮಾರ್ ಜಿ.ಎಚ್.ದೂರಿದರು.
ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆತುರಾತುರವಾಗಿ ಒಳ ಮೀಸಲಾತಿಯನ್ನು ಜಾರಿಗೊಳಿಸಿರುವುದು ಅತ್ಯಂತ ಖಂಡನೀಯ. ಇದರಿಂದ ಸುಪ್ರೀಂಕೋರ್ಟ್ ಮೂಲ ಉದ್ದೇಶ. ಈಡೇರಿಲ್ಲ. ಎಕೆ, ಎಡಿ, ಎಕೆಕೆ ಜಾತಿಗಳು ಪ್ರವರ್ಗ-1 ಯಾವ ಗುಂಪಿಗಾದರೂ ಜಾತಿ ಸರ್ಟಿಫಿಕೇಟ್ಗಳನ್ನು ಪಡೆಯಬಹುದೆಂದು ತುರ್ತಾಗಿ ಮಸೂದೆ ಮಂಡಿಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು?
ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಬಡ್ತಿ ಮೀಸಲಾತಿಯನ್ನು ದೂರವಿಟ್ಟಿದೆ. ಬಜೆಟ್ನಲ್ಲಿ ಎಸ್ಸಿಪಿ, ಟಿಎಸ್ಪಿ. ಹಣವನ್ನು ಪ್ರತ್ಯೇಕವಾಗಿ ತೆಗೆದಿರಿಸಿರುವುದನ್ನು ಮೀಸಲಾತಿ, ಒಳ ಮೀಸಲಾತಿಗೆ ತರಬೇಕು. ಅಲೆಮಾರಿಗಳಿಗೆ ಶೇ.1 ರಷ್ಟು ಮೀಸಲಾತಿ ಕೊಡಬೇಕು. ರಾಜ್ಯ ಸರ್ಕಾರ ಕಣ್ಣೊರೆಸುವ ತಂತ್ರ ಬಿಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗವುದೆಂದು ಎಚ್ಚರಿಸಿದರು.
ಚನ್ನಗಾನಹಳ್ಳಿ ಮಲ್ಲೇಶ್ ಮಾತನಾಡಿ ಸುಪ್ರೀಂ ಕೋರ್ಟ್ ಮಹತ್ತರ ತೀರ್ಪು ನೀಡಿ ಹದಿನಾರು ತಿಂಗಳಾದರೂ ರಾಜ್ಯ ಸರ್ಕಾರ ಇನ್ನು ಪರಿಪೂರ್ಣವಾಗಿ ಜಾರಿಗೊಳಿಸಿಲ್ಲ. 120 ಕೋಟಿ ರೂ.ಗಳನ್ನು ಖರ್ಚು ಮಾಡಿ ಜಸ್ಟಿಸ್ ನಾಗಮೋಹನ್ದಾಸ್ ಕಮಿಟಿ ರಚಿಸಿರುವ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿರಸ್ಕರಿಸಿದ್ದಾರೆ. ಇದರಿಂದ ಮಾದಿಗರಿಗೆ ಅನ್ಯಾಯವಾಗಿದೆ. ಎಸ್ಸಿಪಿ, ಟಿಎಸ್ಪಿ. ಹಣ, ಬಡ್ತಿ ಜಾರಿ, ಅಲೆಮಾರಿಗಳಿಗೆ ಶೇ.1 ರಷ್ಟು ಮೀಸಲಾತಿ ಸಿಗಬೇಕೆಂದು ಒತ್ತಾಯಿಸಿದರು.
ಗೂಳಿಹಟ್ಟಿ ಕೃಷ್ಣಮೂರ್ತಿ ಮಾತನಾಡುತ್ತ ಒಳ ಮೀಸಲಾತಿಗಾಗಿ ಅನೇಕ ಹೋರಾಟಗಳನ್ನು ಮಾಡಿದ್ದೇವೆ. ನಾಗಮೋಹನ್ದಾಸ್ ವರದಿಯನ್ನು ರಾಜ್ಯ ಸರ್ಕಾರ ತಿರುಚಿದ್ದು, ಸರಿಯಾಗುವವರೆಗೂ ಬಿಡುವುದಿಲ್ಲ. ಹೋರಾಡುತ್ತೇವೆ. ಎಸ್ಸಿ.ಗಳಲ್ಲಿ ಮಾದಿಗ ಸಂಬಂಧಿತ 29 ಜಾತಿಗಳಿವೆ. ಸರ್ಕಾರ ಅಧ್ಯಯನ ನಡೆಸದೆ ವರ್ಗ-3 ರಲ್ಲಿ ಸೇರಿಸಿ ಅನೇಕ ತಪ್ಪುಗಳನ್ನು ಮಾಡಿದೆ ಎಂದು ಆಪಾದಿಸಿದರು.
ಜಯಣ್ಣ ಮಾರಘಟ್ಟ ಮಾತನಾಡಿ ನಾಗಮೋಹನ್ದಾಸ್ ವರದಿಯನ್ನು ಗಾಳಿಗೆ ತೂರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳ ಮೀಸಲಾತಿಯನ್ನು ಗೊಂದಲದ ಗೂಡಾಗಿಸಿದ್ದಾರೆ. 35 ವರ್ಷಗಳ ಹೋರಾಟಕ್ಕೆ ಪ್ರಯೋಜನವಿಲ್ಲದಂತಾಗಿದೆ. ಗೊಂದಲ ನಿವಾರಿಸಿ ಇಲ್ಲದಿದ್ದರೆ ಹೋರಾಟ ಎದುರಿಸಿ ಎಂದು ಎಚ್ಚರಿಸಿದರು.
ಕೆ.ಎಂ.ಪರಶುರಾಮ್, ರವಿಕುಮಾರ್ ಇವರುಗಳು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

































