ಬೆಂಗಳೂರು : ಉಪಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವ ಕಾಂಗ್ರೆಸ್ ಈಗ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ತವರು ಜಿಲ್ಲೆ ಹಾಸನದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಈ ಮೂಲಕ ಜೆಡಿಎಸ್-ಬಿಜೆಪಿ ಎರಡಕ್ಕೂ ಟಕ್ಕರ್ ಕೊಡಲು ‘ಕೈ’ ತಂತ್ರ ಹೂಡಿದೆ.
ಸಿಎಂ ಸಿದ್ದರಾಮಯ್ಯ ತಂಡ ವರ್ಸಸ್ ಡಿಸಿಎಂ ಡಿಕೆ ಶಿವಕುಮಾರ್ ತಂಡದ ನಡುವಣ ಮುಸುಕಿನ ಗುದ್ದಾಟದ ಮಧ್ಯೆ ಹಾಸನದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಕ್ಷಣಗಣನೆ ಶುರುವಾಗಿದೆ. ಅರಸೀಕೆರೆ ರಸ್ತೆಯ ಎಸ್ಎಂ ಕೃಷ್ಣ ನಗರದಲ್ಲಿರುವ ಕೆಎಸ್ಸಿಎ ಕ್ರಿಕೆಟ್ ಮೈದಾನದಲ್ಲಿ ಬೃಹತ್ ವೇದಿಕೆ ಸಜ್ಜಾಗಿದೆ. ಲಕ್ಷ ಲಕ್ಷ ಜನರ ಆಗಮನದ ನಿರೀಕ್ಷೆ ಇದೆ.
ಬೆಳಗ್ಗೆ 11.30ಕ್ಕೆ ಹಾಸನದಲ್ಲಿ ಜನಕಲ್ಯಾಣ ಸಮಾವೇಶ ಉದ್ಘಾಟನೆ ಆಗಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಇಡೀ ಸಚಿವ ಸಂಪುಟ ದಂಡೇ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ. 480 ಅಡಿ ಅಗಲ ಮತ್ತು 600 ಅಡಿ ಉದ್ದದ ಬೃಹತ್ ಟೆಂಟ್ ಹಾಕಲಾಗಿದೆ. ಸುಮಾರು 70 ಸಾವಿರ ಜನರು ಕೂರಲು ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಲಕ್ಷಾಂತರ ಜನರು ಸಮಾವೇಶಕ್ಕೆ ಆಗಮಿಸುವ ನಿರೀಕ್ಷೆ ಇರುವುದರಿಂದ, ಪೊಲೀಸ್ ಇಲಾಖೆ ಸಾಕಷ್ಟು ಭದ್ರತಾ ವ್ಯವಸ್ಥೆ ಕೈಗೊಂಡಿದೆ. ಐವರು ಎಸ್ಪಿಗಳು, ಆರು ಎಎಸ್ಪಿಗಳು, 12 ಡಿವೈಎಸ್ಪಿ, 50ಕ್ಕೂಹೆಚ್ಚು ಸಿಪಿಐ, 80ಕ್ಕೂ ಹೆಚ್ಚು ಪಿಎಸ್ಐಗಳು ಸೇರಿ ಎರಡು ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಒಟ್ಟಿನಲ್ಲಿ ಜೆಡಿಎಸ್ ಭದ್ರಕೋಟೆಯಲ್ಲಿ ಕೈ ಶಕ್ತಿ ಪ್ರದರ್ಶನಕ್ಕೆ ಹಾಸನ ಸಜ್ಜಾಗಿದೆ. ವಿಪಕ್ಷಗಳ ಆರೋಪಗಳಿಗೆ ಉತ್ತರ ನೀಡಲೆಂದೇ ನಡೆಯುತ್ತಿರುವ ಸಮಾವೇಶದಲ್ಲಿ ನಾಯಕರ ತಿರುಗೇಟು ಹೇಗಿರಲಿದೆ ಎಂಬ ಕುತೂಹಲ ಮೂಡಿದೆ.