ದೆಹಲಿ :ಕಾಂಗ್ರೆಸ್ಸಿನವರಿಗೆ ಕರ್ನಾಟಕದಲ್ಲಿ ಸರಕಾರ ನಡೆಸಲು ಬರುತ್ತಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಆರೋಪಿಸಿದ್ದಾರೆ.
ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರಿಸಿದರು. ಮುಂಗಾರು ಹಂಗಾಮು ಪ್ರಾರಂಭಕ್ಕೆ ಮೊದಲೇ ನಾವು ಈ ಹಂಗಾಮಿನಲ್ಲಿ ರಾಜ್ಯದಲ್ಲಿ ಎಷ್ಟು ಹೆಕ್ಟೇರ್ ಬಿತ್ತನೆ ಮಾಡುತ್ತೇವೆ? ಯಾವ್ಯಾವ ಬೆಳೆ ಬಿತ್ತನೆ ಆಗಲಿದೆ? ಡಿಎಪಿ, ಯೂರಿಯಾ ಸೇರಿ ಎಷ್ಟು ಗೊಬ್ಬರ ಬೇಕಾಗಲಿದೆ?- ಇವೆಲ್ಲ ಮಾಹಿತಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಸಭೆಯ ಮೂಲಕ ಪಡೆಯಬೇಕಿತ್ತು. ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಪಡೆದ ವಿವಿಧ ಜಿಲ್ಲೆಗಳ ಮಾಹಿತಿಯನ್ನು ಕ್ರೋಡೀಕರಿಸಿದ್ದರೆ ಸಮರ್ಪಕ ಲೆಕ್ಕಾಚಾರ ಸಿಗುತ್ತಿತ್ತು ಎಂದು ನುಡಿದರು.
ಮುಂಗಾರು ಹಂಗಾಮಿಗೆ ರಾಜ್ಯದಿಂದ ಸುಮಾರು 6.30 ಲಕ್ಷ ಟನ್ ಗೊಬ್ಬರದ ಪ್ರಸ್ತಾವನೆ ಕಳಿಸಿದ್ದು, ಕೇಂದ್ರವು 7.70 ಲಕ್ಷ ಟನ್ ಗೊಬ್ಬರವನ್ನು ಕೊಟ್ಟಿದೆ. ಬೇಡಿಕೆಗಿಂತ ಹೆಚ್ಚು ಕೊಟ್ಟಾಗ ಹಾಹಾಕಾರ ಏಕೆ? ಕಡಿಮೆ ಹೇಗಾಗಿದೆ? ಎಂದು ಕೇಳಿದರು. ಇದನ್ನು ಆಡಳಿತ ಮಾಡುವವರು ಆಲೋಚಿಸಬೇಕಿದೆ. ಗೊಬ್ಬರದ ಕಳ್ಳ ವ್ಯಾಪಾರಿಗಳು ಕೆಲವರಿದ್ದಾರೆ. ಅವರು ಮಾರುಕಟ್ಟೆಯಲ್ಲಿ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ, ಹೆಚ್ಚಿನ ಹಣಕ್ಕೆ ರೈತರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದರು.
ನೀವು ಜಿಲ್ಲಾವಾರು ಬಳಕೆಯನ್ನು ನೋಡಿಲ್ಲ; ಮಂತ್ರಿಗಳು ಶೋಪೀಸ್‍ಗಳಲ್ಲ. ಜಿಲ್ಲೆಯಲ್ಲಿ ಜಿಲ್ಲಾ ಸಚಿವರೇ ಮುಖ್ಯಮಂತ್ರಿ ಇದ್ದಂತೆ. ಆ ರೀತಿ ಆಡಳಿತ ನಡೆಸದೇ ಇದ್ದರೆ ಜಿಲ್ಲಾ ಉಸ್ತುವಾರಿ ಸಚಿವರ ವ್ಯವಸ್ಥೆಯನ್ನು ಹಾಗೇ ಮುಂದುವರೆಸಬೇಕೇ ಅಥವಾ ರದ್ದು ಮಾಡಬೇಕೇ ಎಂದು ಸಿದ್ದರಾಮಯ್ಯನವರು ಯೋಚಿಸಲಿ ಎಂದು ಒತ್ತಾಯಿಸಿದರು.
ಈ ಸರಕಾರಕ್ಕೆ ದೀನದಲಿತರ ಬಗ್ಗೆ ಕಳಕಳಿ- ಕಾಳಜಿ ಇಲ್ಲ…
ಗ್ಯಾರಂಟಿ ಯೋಜನೆಗಳಿಗೆ ಎಸ್‍ಸಿ, ಎಸ್‍ಟಿ ಸಮುದಾಯದ ಹಣ ಬಳಕೆ ಆಗಿದೆ ಎಂಬ ಕುರಿತು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದರು.
ಈ ಸರಕಾರಕ್ಕೆ ದೀನದಲಿತರ ಬಗ್ಗೆ ಕಳಕಳಿ- ಕಾಳಜಿ ಇಲ್ಲ. ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‍ನಲ್ಲಿ ಅನುದಾನ ಕೊಟ್ಟಿದ್ದಾಗಿ ಸಿದ್ದರಾಮಯ್ಯನವರು ಬೆನ್ನು ಚಪ್ಪರಿಸಿಕೊಳ್ಳುತ್ತಾರೆ. ಸಾಮಾಜಿಕ- ಶೈಕ್ಷಣಿಕ, ಆರ್ಥಿಕವಾಗಿ ಸಾವಿರಾರು ವರ್ಷಗಳಿಂದ ತುಳಿತಕ್ಕೆ ಒಳಗಾದ ದೀನದಲಿತರು ಅದರಲ್ಲೂ ಅಸ್ಪøಶ್ಯ ಜನಾಂಗದವರನ್ನು ಮೇಲೆತ್ತಲು ವಿಶೇಷ ಅನುದಾನ ಕೊಡುವ ವ್ಯವಸ್ಥೆ ಇದೆ. ಆ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ವಿಶೇಷ ಯೋಜನೆ ನೀಡಲು ಮತ್ತು ಅವರನ್ನು ಸಬಲರನ್ನಾಗಿ ಮಾಡಲು ಆ ಮೊತ್ತ ಬಳಕೆ ಆಗಬೇಕು ಎಂದು ಗೋವಿಂದ ಕಾರಜೋಳ ಅವರು ಆಗ್ರಹಿಸಿದರು.