ಟೋಕಿಯೋ: ವಿಶ್ವದಲ್ಲಿಯೇ ಮೊದಲ ಬಾರಿಗೆ ಈ ದೇಶದಲ್ಲಿ 3ಡಿ ಪ್ರಿಂಟೆಡ್ ರೈಲು ನಿಲ್ದಾಣವನ್ನು ನಿರ್ಮಿಸಲಾಗಿದೆ. ಅದು ಕೂಡ ಕೇವಲ 6 ಗಂಟೆಯಲ್ಲಿ ಎನ್ನುವುದೇ ಗಮನಿಸಬೇಕಾದ ಸಂಗತಿ.
ಹೌದು, ಜಪಾನ್‌ನಲ್ಲಿ ಕೇವಲ 6 ಗಂಟೆಯಲ್ಲಿ ವಿಶ್ವದ ಮೊದಲ 3ಡಿ ಪ್ರಿಂಟೆಡ್ ರೈಲು ನಿಲ್ದಾಣವನ್ನು ನಿರ್ಮಿಸಲಾಗಿದೆ. ಜಪಾನ್ ಅರಿಡಾ ನಗರದ ಹಟ್ಟುಶಿಮಾ ರೈಲು ನಿಲ್ದಾಣದಲ್ಲಿ 3ಡಿ ತಂತ್ರಜ್ಞಾನ ಬಳಸಿ ಹೊಸ ಕಟ್ಟಡ ನಿರ್ಮಿಸಲಾಗಿದೆ. ಅಷ್ಟಕ್ಕೂ, ಜಪಾನ್‌ನ ಪ್ರಮುಖ ರೈಲ್ವೆ ಕಂಪನಿಯಾದ ಜಪಾನ್ ರೈಲ್ವೆ ಕಂಪನಿ ರೈಲು ನಿಲ್ದಾಣದ ಭಾಗಗಳನ್ನು ಬೇರೆಡೆ 3ಡಿ ತಂತ್ರಜ್ಞಾನದಲ್ಲಿ ಪ್ರಿಂಟ್ ಮಾಡಿ ಹಟ್ಟುಶಿಮಾದಲ್ಲಿ ಅದನ್ನು ಜೋಡಿಸಿದೆ. 3ಡಿ ತಂತ್ರಜ್ಞಾನದಲ್ಲಿ ಕಟ್ಟಡದ ಭಾಗಗಳನ್ನು ಪ್ರಿಂಟ್ ಮಾಡಲು ಮತ್ತು ಅಳವಡಿಸಲು 7 ದಿನ ಬೇಕಾಯಿತು. ಇದನ್ನೂ ಓದಿ: 5 ಗಂಟೆ 30 ನಿಮಿಷಗಳಲ್ಲಿ ಭಗವದ್ಗೀತೆ ಶ್ಲೋಕ ಬರೆದು ವಿಶ್ವದಾಖಲೆ ಬರೆದ ಬ್ರಹ್ಮಾವರದ ಸುಶಾಂತ್ ..! ಕಟ್ಟಡ ನಿರ್ಮಾಣಕ್ಕೆ ಏನಿಲ್ಲಾಂದ್ರು, ಹಲವು ತಿಂಗಳುಗಳೇ ಬೇಕಾಗುತ್ತದೆ. ಹಾಗಾಗಿ ಫ್ಯಾಕ್ಟರಿಯಲ್ಲಿ 3ಡಿ ತಂತ್ರಜ್ಞಾನದಲ್ಲಿ ಕಟ್ಟಡದ ಭಾಗಗಳನ್ನು ಮೊದಲೇ ಸಿದ್ಧಪಡಿಸಿ ಅಳವಡಿಸುವುದರಿಂದ ಸಮಯದ ಉಳಿತಾಯವಾಗುತ್ತದೆ.
ಹಟ್ಟುಶಿಮಾದಲ್ಲಿ ರಾತ್ರಿ ಕೊನೆಯ ರೈಲು ಹೊರಟ ಬಳಿಕ ಕೆಲಸ ಆರಂಭವಾಗಿ, ಬೆಳಗ್ಗೆ, ಮೊದಲ ರೈಲು ಬರುವಷ್ಟರಲ್ಲಿ ನಿರ್ಮಾಣ ಕಾರ್ಯ ಮುಗಿದಿತ್ತು. ಹೊಸ ರೈಲು ನಿಲ್ದಾಣ 100 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಇದರಲ್ಲಿ ಟಿಕೆಟ್ ಮಷಿನ್ ಮತ್ತು ಕಾರ್ಡ್ ರೀಡರ್ ಯಂತ್ರಗಳ ಅಳವಡಿಕೆ ಕಾರ್ಯ ಬಾಕಿ ಇದೆ. ಜುಲೈ ವೇಳೆಗೆ ಹೊಸ ಕಟ್ಟಡ ಪ್ರಯಾಣಿಕರ ಸೇವೆಗೆ ಸಿದ್ಧವಾಗಲಿದೆ ಎಂದು ರೈಲ್ವೆ ಕಂಪನಿ ತಿಳಿಸಿದೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.