ಶ್ರೀನಗರ : ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಮ್ಮು ಕಾಶ್ಮೀರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ರಂಬನ್ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಮೂವರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿರನ್ನು ರಕ್ಷಿಸಲಾಗಿದೆ.
ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹಲವು ಮನೆಯೊಳಗೆ ನೀರು ನುಗ್ಗಿದೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಎನ್‌ಹೆಚ್-44ರಲ್ಲಿ ಮಣ್ಣು ಮತ್ತು ಕಲ್ಲುಗಳು ಕುಸಿದಿದ್ದು, ಗುಡ್ಡ ಕುಸಿತದಿಂದ ಹೆದ್ದಾರಿ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಹೀಗಾಗಿ ಹೆದ್ದಾರಿ ಸಂಚಾರ ನಿಷೇಧಿಸಲಾಗಿದ್ದು, ಅಗತ್ಯ ವಸ್ತುಗಳ ಪೂರೈಕೆಗೂ ಸಮಸ್ಯೆಯಾಗಿದೆ.
ಬನಿಹಾಲ್‌ನಲ್ಲಿ 71 ಮಿ.ಮೀ, ಖಾಜಿ ಕುಂಡ್‌ನಲ್ಲಿ 53 ಮಿ.ಮೀ, ಕೊಕರ್‌ನಾಗ್‌ನಲ್ಲಿ 43 ಮಿ.ಮೀ, ಪಹಲ್ಗಾಮ್‌ನಲ್ಲಿ 34 ಮಿ.ಮೀ ಮತ್ತು ಶ್ರೀನಗರದಲ್ಲಿ 12 ಮಿ.ಮೀ. ಮಳೆಯಾಗಿದೆ. ಶ್ರೀನಗರದ ದಕ್ಷಿಣ ಪ್ರದೇಶದಲ್ಲಿ 80-100 ಮಿ.ಮೀ ಮಳೆಯಾಗಿದೆ. ರಂಬನ್ ಮತ್ತು ಬನಿಹಾಲ್ ನಡುವಿನ ಹಲವೆಡೆ ಭೂಕುಸಿತ ಉಂಟಾಗಿದ್ದು, ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿವೆ.