ಚಿತ್ರದುರ್ಗ: ತತ್ವಪದಗಳು ಸಮಾನತೆಯ ಆಶಯಕ್ಕೆ ಅಪಾರವಾದ ಕೊಡುಗೆ ನೀಡಿವೆ ಎಂದು ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ಪ್ರೊ.ಜೆ.ಕರಿಯಪ್ಪ ಮಾಳಿಗೆ ಹೇಳಿದರು.
ನಗರದ ಪತ್ರಕರ್ತರ ಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಯುವ ಪತ್ರಕರ್ತರಿಗೆ ಕನ್ನಡ ಸಾಹಿತ್ಯಾಭಿರುಚಿ ಶಿಬಿರದ ಗೋಷ್ಠಿ-3ರ ಕೀರ್ತನೆ, ತತ್ವಪದ ಹಾಗೂ ಸಾಂಗತ್ಯ ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಇಡೀ ಕನ್ನಡ ಸಾಹಿತ್ಯ ಚರಿತ್ರೆಕಾರರು ತತ್ವಪದವನ್ನು ತಿರಸ್ಕಾರ ಮಾಡಿ, ತತ್ವಪದಗಳು ಹುಟ್ಟಿದ ಕಾಲವನ್ನು ಕತ್ತಲಯುಗ ಎಂದು ದಾಖಲಿಸಿದ್ದಾರೆ. ಇದು ಕನ್ನಡ ಸಾಹಿತ್ಯದ ವಿಪರ್ಯಾಸ ಎಂದು ವಿಷಾಧಿಸಿದರು.
ಭಕ್ತಿಯನ್ನು ಲೋಕದೃಷ್ಠಿಯನ್ನಾಗಿ ಮಾಡಿಕೊಂಡವರು ಅನುಭಾವಿಗಳು. ಮಧ್ಯಕಾಲಿನ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹುಟ್ಟಿಕೊಂಡ ವಚನ ಸಾಹಿತ್ಯದಲ್ಲಿ ಬಂದ ಸ್ವರವಚನಗಳು 15ನೇ ಶತಮಾನದಲ್ಲಿ ಬಂದ ಶಿವಯೋಗಿಗಳ ಕೈವಲ್ಯ ಸಾಹಿತ್ಯ ಮತ್ತು 17-18ನೇ ಶತಮಾನದಲ್ಲಿ ಕಂಡುಬಂದ ತತ್ವಪದ ಸಾಹಿತ್ಯದ ಅನುಭಾವಿಗಳು ಭಕ್ತಿಯನ್ನು ಲೋಕದೃಷ್ಠಿಯನ್ನಾಗಿ ಮಾಡಿಕೊಂಡು ಸಾಮಾಜಿಕ ಸೌಹರ್ದತೆಗೆ ಕಾರಣೀಭೂತರಾಗಿದ್ದಾರೆ. ಜೊತೆಗೆ ನಾಥ, ಸಿದ್ದ, ಆರೂಢ, ಅವಧೂತ, ಸಂತ ಮತ್ತು ಶರಣ ಪರಂಪರೆಯವರು ಮಾನವೀಯ ಮೌಲ್ಯಗಳನ್ನು ತಮ್ಮ ನಡೆ-ನುಡಿಯಲ್ಲಿ ಅನುಸರಿಸುತ್ತಾ ಸಾಹಿತ್ಯ ರಚನೆ ಮಾಡಿದ್ದಾರೆ. ಜಾತಿ, ಮತ, ಧರ್ಮ ಸೋಂಕಿಲ್ಲದೇ ಸಮಾನತೆಯ ಆಶಯವನ್ನು ಸಮಾಜಕ್ಕೆ ಬಿತ್ತಿದ್ದಾರೆ. ಸಂವಿಧಾನದ ಆಶಯಗಳನ್ನು ಒಳಗೊಂಡ ತತ್ವಪದಗಳು, ಸಮುದಾಯದ ವಿವೇಕದ ಫಲಗಳಾಗಿ ಕೂಡಿಬಂದಿವೆ ಎಂದು ಹೇಳಿದರು.
ಒಂದು ರೀತಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಇಂತಹ ಜನಮುಖಿ ಮತ್ತು ಸಮಾಜಮುಖಿ ಆಶಯಗಳುಳ್ಳ ಕೀರ್ತನೆ, ತತ್ವಪದಗಳನ್ನು ನಮ್ಮ ದೈನಂದಿನ ಬದುಕಿನ ಜೀವನ ಮೌಲ್ಯವನ್ನಾಗಿ ಅಳವಡಿಸಿಕೊಂಡರೆ ಈವತ್ತಿನ ಅನೇಕ ಸಮಸ್ಯೆಗಳಿಗೆ, ಸಂಕಟಗಳಿಗೆ ಪರಿಹಾರ ಕಾಣಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಪತ್ರಕರ್ತರು ಇಂತಹ ಮಾನವೀಯ ಮೌಲ್ಯವುಳ್ಳ ಸಾಹಿತ್ಯದ ತಿಳುವಳಿಕೆಯನ್ನು ಅರಿತರೆ ಮಾಧ್ಯಮಗಳಲ್ಲಿ ತಮ್ಮ ಸೃಜನಶೀಲತೆ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಪತ್ರಕರ್ತರಾದ ಗೌನಹಳ್ಳಿ ಗೋವಿಂದಪ್ಪ ಮಾತನಾಡಿ, ಪತ್ರಕರ್ತರಾದವರು ಸುದ್ದಿ ವಿಚಾರದಲ್ಲಿ ಯಾವುದನ್ನೂ ಅಮುಖ್ಯ ಎಂದು ಪರಿಗಣಿಸಬಾರದು. ಸುದ್ದಿಯಲ್ಲಿರುವ ಸಣ್ಣ ಸುಳಿವಿನ ಹಿಂದೆ ಹೋದಾಗ ಇಡೀ ಸಮಾಜಕ್ಕೆ ಮಾದರಿಯಾಗುವಂತಹ ವರದಿಯನ್ನು ನೀಡಬಹುದು. ವರದಿಗಾರಿಕೆಯಲ್ಲಿ ನಿತ್ಯವೂ ಹೊಸತನ ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಿರಂತರ ಅಧ್ಯಯನ ಬಹುಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ದಿನೇಶ ಗೌಡಗೆರೆ, ಹಿರಿಯ ಪತ್ರಕರ್ತರಾದ ಚಳ್ಳಕೆರೆ ಯರ್ರಿಸಾಮಿ ಸೇರಿದಂತೆ ಶಿಬಿರಾರ್ಥಿಗಳು ಇದ್ದರು.