ಭೋಪಾಲ್ : ಕೆಮ್ಮಿನ ಸಿರಪ್‌ನ ಅಡ್ಡಪರಿಣಾಮ ಬೀರಿ ಕೇವಲ 15 ದಿನಗಳ ಅಂತರದಲ್ಲಿ 6 ಮಕ್ಕಳು ಕಿಡ್ನಿ ವೈಫಲ್ಯವಾಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಛಿಂದ್ವಾರದಲ್ಲಿ ಸಂಭವಿಸಿದೆ.
ಆರಂಭದಲ್ಲಿ ಋತುಮಾನದ ಜ್ವರದ ಸಾಮಾನ್ಯ ಸಮಸ್ಯೆಗಳಂತೆ ಕಂಡುಬಂದಿದ್ದ ಈ ಘಟನೆ ಇದೀಗ ಮಕ್ಕಳ ಸಾವಿಗೆ ಕಾರಣವಾಗಿದೆ. ಮಕ್ಕಳಿಗೆ ನೀಡಿದ ಕೆಮ್ಮಿನ ಸಿರಪ್‌ನ ಅಡ್ಡಪರಿಣಾಮ ಬೀರಿ 6 ಮಕ್ಕಳಿಗೆ ಕಿಡ್ನಿ ವೈಫಲ್ಯ ಉಂಟಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಸಾವನ್ನಪ್ಪಿದ ಮಕ್ಕಳೆಲ್ಲರೂ ಐದು ವರ್ಷದೊಳಗಿನವರು. ಎಲ್ಲಾ ಮಕ್ಕಳು ಮೊದಲು ಶೀತ ಮತ್ತು ಸೌಮ್ಯ ಜ್ವರದ ವಿಚಾರವಾಗಿ ಸ್ಥಳೀಯ ಕ್ಲೀನಿಕ್‌ನಲ್ಲಿ ಚಿಕಿತ್ಸೆ ಪಡೆದಿದ್ದರು. ಸ್ಥಳೀಯ ವೈದ್ಯರು ಕೆಮ್ಮಿನ ಸಿರಪ್‌ಗಳು ಸೇರಿದಂತೆ ನಿಯಮಿತ ಔಷಧಿಗಳನ್ನು ಸೂಚಿಸಿದರು. ಅದನ್ನು ಸೇವಿಸಿದ ನಂತರ ಮಕ್ಕಳು ಚೇತರಿಸಿಕೊಳ್ಳುತ್ತಿರುವಂತೆ ತೋರುತ್ತಿತ್ತು ಎಂದು ಹೇಳಲಾಗಿದೆ.
ಆದರೆ ಕೆಲವೇ ದಿನಗಳಲ್ಲಿ ಮತ್ತೆ ರೋಗ ಲಕ್ಷಣಗಳು ಮರಳಿದವು. ನಂತರ ಮೂತ್ರ ವಿಸರ್ಜನೆಯಲ್ಲಿ ಹಠಾತ್ ಮತ್ತು ಆತಂಕಕಾರಿ ಇಳಿಕೆ ಕಂಡುಬಂದಿತು. ಸ್ಥಿತಿಯು ಬೇಗನೆ ಹದಗೆಟ್ಟು ಮೂತ್ರಪಿಂಡದ ಸೋಂಕುಗಳಾಗಿ ಮಾರ್ಪಟ್ಟಿತು. ಬಳಿಕ ಉನ್ನತ ಚಿಕಿತ್ಸೆಗಾಗಿ ಮಹಾರಾಷ್ಟ್ರದ ನಾಗ್ಪುರಕ್ಕೆ ಮಕ್ಕಳನ್ನು ಕರೆದೊಯ್ಯಲಾಗಿದ್ದರೂ, ಮೂವರು ಮಕ್ಕಳು ಅಲ್ಲಿಯೇ ಮೃತಪಟ್ಟಿದ್ದಾರೆ.
ಮಕ್ಕಳ ಸಾವಿಗೆ ಕೆಮ್ಮಿನ ಸಿರಪ್ ಕಾರಣ. ವಿಷಕಾರಿ ಡೈಥಿಲೀನ್ ಗ್ಲೈಕೋಲ್ ಬೆರೆಸಿದ ಕಲುಷಿತ ಕೆಮ್ಮಿನ ಸಿರಪ್ ಸಾವುಗಳಿಗೆ ಕಾರಣ ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಮಕ್ಕಳ ಮೂತ್ರಪಿಂಡದ ಬಯಾಪ್ಸಿ ಪರೀಕ್ಷೆ ನಡೆಸಿದಾಗ, ಔಷಧೀಯ ವಿಷಕ್ಕೆ ಸಂಬಂಧಿಸಿದ ವಿಷಕಾರಿ ರಾಸಾಯನಿಕವಾದ ಡೈಥಿಲೀನ್ ಗ್ಲೈಕಾಲ್ ಮಾಲಿನ್ಯ ಇದೆ. ಹೆಚ್ಚಿನ ಮಕ್ಕಳಿಗೆ ಕೋಲ್ಡ್ರಿಫ್ ಮತ್ತು ನೆಕ್ಸ್ಟ್ರೋ-ಡಿಎಸ್ ಸಿರಪ್‌ಗಳನ್ನು ನೀಡಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ.
ಇನ್ನು ಜಿಲ್ಲೆಯಾದ್ಯಂತ ಕೋಲ್ಡ್ರಿಫ್ ಮತ್ತು ನೆಕ್ಸ್ಟ್ರೋ-ಡಿಎಸ್ ಸಿರಪ್‌ಗಳ ಮಾರಾಟವನ್ನು ಚಿಂದ್ವಾರ ಜಿಲ್ಲಾಧಿಕಾರಿ ತಕ್ಷಣವೇ ನಿಷೇಧಿಸಿದ್ದಾರೆ. ಜೊತೆಗೆ ಇದರ ಬಳಕೆ ಮಾಡದಂತೆ ವೈದ್ಯರು, ಔಷಧಾಲಯಗಳು ಮತ್ತು ಪೋಷಕರಿಗೆ ತುರ್ತು ಸಲಹೆ ನೀಡಿದ್ದಾರೆ.