ತಮಿಳುನಾಡು: ಕನ್ಯಾಕುಮಾರಿಯಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ ಗಾಜಿನ ಸೇತುವೆಯನ್ನು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಲೋಕಾಪರ್ಣೆಗೊಳಿಸಿದರು.
‘ಕನ್ಯಾಕುಮಾರಿಯನ್ನು ಜಾಗತಿಕ ಪ್ರವಾಸಿ ತಾಣವಾಗಿ ಉತ್ತೇಜಿಸುವ ಉದ್ದೇಶದಿಂದ ಗಾಜಿನ ಸೇತುವೆ ನಿರ್ಮಾಣವಾಗಿರುವುದು ದೂರದೃಷ್ಟಿ ಯೋಜನೆ’ ಎಂದು ಸ್ಟಾಲಿನ್ ಬಣ್ಣಿಸಿದರು. ಕನ್ಯಾಕುಮಾರಿಯಲ್ಲಿ ನಿರ್ಮಾಣವಾಗಿರುವ ವಾಸ್ತುಶಿಲ್ಪದ ಅದ್ಭುತ ಗಾಜಿನ ಸೇತುವೆ ವಿವೇಕಾನಂದರ ಸ್ಮಾರಕ ಹಾಗೂ 133 ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆಯನ್ನು ಸಂಪರ್ಕಿಸುತ್ತದೆ.
ಗಾಜಿನ ಸೇತುವೆಯು 252 ಅಡಿ (77 ಮೀಟರ್) ಉದ್ದ ಮತ್ತು 10 ಮೀ. ಅಗಲಕ್ಕೆ ವ್ಯಾಪಿಸಿದೆ. ಬರೋಬ್ಬರಿ 37 ಕೋಟಿ ರೂ. ವೆಚ್ಚದಲ್ಲಿ ತಮಿಳುನಾಡು ಸರ್ಕಾರ ಗಾಜಿನ ಸೇತುವೆಯನ್ನು ನಿರ್ಮಿಸಿದೆ. ಇದು ಕನ್ಯಾಕುಮಾರಿಯ ಪ್ರವಾಸೋದ್ಯಮ ಆಕರ್ಷಣೆಗೆ ಇನ್ನಷ್ಟು ಕೊಡುಗೆ ನೀಡಲಿದೆ. ಪ್ರವಾಸಿಗರಿಗೆ ಈ ಸೇತುವ ಹೊಸ ಅನುಭವವನ್ನು ನೀಡುತ್ತದೆ.
ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯುವ ನಿರೀಕ್ಷೆಯಿದೆ. ಪ್ರವಾಸಿಗರು ಈ ಹಿಂದೆ ಕನ್ಯಾಕುಮಾರಿ ಬೋಟ್ ಜೆಟ್ಟಿಯಿಂದ ವಿವೇಕಾನಂದ ಸ್ಮಾರಕಕ್ಕೆ ಮತ್ತು ನಂತರ ತಿರುವಳ್ಳುವರ್ ಪ್ರತಿಮೆಗೆ ದೋಣಿಯಲ್ಲಿ ಪ್ರಯಾಣಿಸಬೇಕಾಗಿತ್ತು. ಇದೀಗ ಗಾಜಿನ ಸೇತುವೆ ಉದ್ಘಾಟನೆ ಆಗಿರುವುದರಿಂದ, ಇನ್ನು ಮುಂದೆ ಪ್ರವಾಸಿಗರು ಎರಡು ಸ್ಮಾರಕಗಳ ನಡುವೆ ನಡೆದುಕೊಂಡೇ ಹೋಗಬಹುದಾಗಿದೆ.
ವಿಶೇಷತೆಗಳೇನು? 77 ಅಡಿ ಉದ್ದ ಮತ್ತು 10 ಮೀಟರ್ ಅಗಲವನ್ನು ವ್ಯಾಪಿಸಿರುವ ‘ಬೌಸ್ಟ್ರಿಂಗ್-ಆರ್ಚ್’ ವಿನ್ಯಾಸದ ಗಾಜಿನ ಸೇತುವೆ, ಪಾರದರ್ಶಕ ಗಾಜಿನ ಮೇಲ್ಮೈ ಹೊಂದಿದೆ. ಇದರಲ್ಲಿ ಕ್ರಮಿಸುವಾಗ ಪ್ರವಾಸಿಗರಿಗೆ ಸಮುದ್ರದ ಮೇಲೆ ನಡೆಯುವ ಭಾವನೆಯನ್ನು ನೀಡುತ್ತದೆ. ಸುಧಾರಿತ ನಿರ್ಮಾಣ ತಂತ್ರಜ್ಞಾನವನ್ನು ಬಳಸಿ ಆಕರ್ಷಕ ಸೇತುವೆಯನ್ನು ನಿರ್ಮಿಸಲಾಗಿದೆ.
ಹೆಚ್ಚಿನ ಆರ್ದ್ರತೆ, ಸಮುದ್ರದ ಉಪ್ಪು ನೀರಿನ ಗಾಳಿ ಮತ್ತು ಸವೆತ ಸೇರಿದಂತೆ ಕಠಿಣ ಪರಿಸ್ಥಿತಿಗಳನ್ನು ವಿರೋಧಿಸುವಂತೆ ವಿನ್ಯಾಸಗೊಳಿಸಲಾಗಿದೆ. ಎರಡು ಐತಿಹಾಸಿಕ ಸ್ಮಾರಕಗಳನ್ನು ಸಂಪರ್ಕಿಸುವ ಮೂಲಕ ಈ ಗಾಜಿನ ಸೇತುವೆಯು ತಮಿಳುನಾಡಿನ ಶ್ರೀಮಂತ ಪರಂಪರೆಯನ್ನು ಮತ್ತು ಆಧುನಿಕ ಇಂಜಿನಿಯರಿಂಗ್‌ನ ಸಾಧನೆಗಳನ್ನು ಪ್ರದರ್ಶಿಸುತ್ತದೆ. ಜತೆಗೆ ಈ ಹೂಡಿಕೆಯಿಂದ ಸ್ಥಳೀಯ ಪ್ರವಾಸೋದ್ಯಮ ಮತ್ತು ಸಂಬಂಧಿತ ಕೈಗಾರಿಕೆಗಳನ್ನು ಉತ್ತೇಜಿಸಲು ಸಹಕಾರಿಯಾಗಿದೆ.

































