ಶ್ರೀನಗರ : ಚಳಿ ತಡೆಯಲು ಸಾಧ್ಯವಾಗದೇ ಉಸಿರುಗಟ್ಟಿ ದಂಪತಿ ಸೇರಿ ಮೂವರು ಮಕ್ಕಳು ಮೃತಪಟ್ಟ ಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಸಂಭವಿಸಿದೆ.
ಮೃತರನ್ನು ಮೂಲತಃ ಬಾರಾಮುಲ್ಲಾ ಜಿಲ್ಲೆಯವರು ಎನ್ನಲಾಗಿದೆ. ಬಾರಾಮುಲ್ಲಾದಿಂದ ಬಂದಿದ್ದ ದಂಪತಿ ಹಾಗೂ ಅವರ ಮೂವರು ಮಕ್ಕಳು ಶ್ರೀನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಭಾರಿ ಚಳಿಯಿಂದ ಈ ಐವರು ಉಸಿರುಗಟ್ಟಿದ್ದು, ಪ್ರಜ್ಞಾಹೀನರಾಗಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್ಮು- ಕಾಶ್ಮೀರ ಕಣಿವೆ ಕಳೆದ 40 ದಿನಗಳಿಂದ ಭಾರಿ ಚಳಿಗೆ ತುತ್ತಾಗಿದೆ. ಎಲ್ಲೆಡೆ ಹಿಮ ಆವರಿಸುತ್ತಿದೆ. ಜನ ಮನೆಯಿಂದ ಹೊರ ಬರುತ್ತಿಲ್ಲ. ಇನ್ನೂ ಕೆಲ ದಿನ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹೇಳಲಾಗಿದೆ.
ಮೃತರ ನಿಧನಕ್ಕೆ ಮುಖ್ಯಮಂತ್ರಿ ಓಮರ್ ಅಬ್ದುಲ್ ಸಂತಾಪ ಸೂಚಿಸಿದ್ದು, ಆಪ್ತರನ್ನು ಕಳೆದುಕೊಂಡ ಕುಟುಂಬಸ್ಥರಿಗೆ ದೇವರು ನೋವನ್ನು ಭರಿಸುವ ಶಕ್ತಿ ನೀಡಲಿ. ಅಗಲಿದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ. ಜೊತೆಗೆ ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸಂತಾಪ ಸೂಚಿಸಿದ್ದಾರೆ.