ಬೆಂಗಳೂರು : ಬೀದಿ ನಾಯಿಗಳನ್ನು ಕಿರುಕುಳವೆಂದು ಪರಿಗಣಿಸುವುದು ಆಡಳಿತವಲ್ಲ, ಅದು “ಕ್ರೌರ್ಯ” ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ದೆಹಲಿ-ಎನ್‌ಸಿಆರ್ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಎಲ್ಲಾ ಬೀದಿ ನಾಯಿಗಳನ್ನು ಬೀದಿಗಳಿಂದ ಶಾಶ್ವತವಾಗಿ ಆಶ್ರಯ ತಾಣಗಳಿಗೆ “ಆದಷ್ಟು ಬೇಗ” ಸ್ಥಳಾಂತರಿಸುವಂತೆ ನಿರ್ದೇಶಿಸಿದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.
ಬೀದಿ ನಾಯಿಗಳ ಕಡಿತದಿಂದಾಗಿ, ವಿಶೇಷವಾಗಿ ಮಕ್ಕಳಲ್ಲಿ ರೇಬೀಸ್ ರೋಗ ಹರಡುವುದರಿಂದ “ಅತ್ಯಂತ ಕಠೋರ” ಪರಿಸ್ಥಿತಿ ಉಂಟಾಗಿದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ಈ ಕಾರಣದಿಂದ ಸುಪ್ರಿಂ ತೀರ್ಪಿನ ವಿಚಾರವಾಗಿ “ಬೀದಿ ನಾಯಿಗಳನ್ನು ತೊಂದರೆಯಂತೆ ಪರಿಗಣಿಸುವುದು ಆಡಳಿತವಲ್ಲ – ಅದು ಕ್ರೌರ್ಯ. ಮಾನವೀಯ ಸಮಾಜಗಳು ಜನರು ಮತ್ತು ಪ್ರಾಣಿಗಳನ್ನು ರಕ್ಷಿಸುವ ಪರಿಹಾರಗಳನ್ನು ಕಂಡುಕೊಳ್ಳುತ್ತವೆ” ಎಂದು ಸಿದ್ದರಾಮಯ್ಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ದೆಹಲಿ-ಎನ್‌ಸಿಆರ್‌ನಿಂದ ಎಲ್ಲಾ ಬೀದಿ ನಾಯಿಗಳನ್ನು ತೆಗೆದುಹಾಕಬೇಕೆಂಬ ಸುಪ್ರೀಂ ಕೋರ್ಟ್ ನಿರ್ದೇಶನವು ದಶಕಗಳ ಮಾನವೀಯ, ವೈಜ್ಞಾನಿಕ ಬೆಂಬಲಿತ ನೀತಿಯಿಂದ ಹಿಂದಕ್ಕೆ ಸರಿದಿದೆ ಎಂದು ಒತ್ತಿ ಹೇಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಮುಖ್ಯಮಂತ್ರಿಯವರು ಪೋಸ್ಟ್ ಮಾಡಿದ್ದಾರೆ.