ಬೆಂಗಳೂರು : ಕರ್ನಾಟಕ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿತ್ವವನ್ನು ಪರಿಶೀಲಿಸಲು ಸಂಸ್ಥೆ ಲೋಕನೀತಿ ಮತ್ತು ಸಿ.ಎಸ್.ಡಿಎಸ್ ಸಮೀಕ್ಷೆ ನಡೆಸಿ, ಮಹತ್ವದ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ಈ ಸಮೀಕ್ಷೆಯ ವರದಿ ಯೋಜನೆಗಳ ವ್ಯಾಪ್ತಿ, ಪರಿಣಾಮಗಳು ಮತ್ತು ಜನಜಾಗೃತಿಯ ಸ್ಥಿತಿಯನ್ನು ಬಹುಮುಖ್ಯ ಅಂಶಗಳೊಂದಿಗೆ ಬೆಳಕಿಗೆ ತಂದಿದೆ.
ಅನೇಕ ಕುಟುಂಬಗಳಿಗೆ ವರವಾದ ಅನ್ನಭಾಗ್ಯ ಯೋಜನೆ : ಸರ್ಕಾರದ ಅನೇಕ ಉಚಿತ ಯೋಜನೆಗಳ ಪೈಕಿ ಅನ್ನಭಾಗ್ಯ ಯೋಜನೆ ಅತ್ಯಂತ ಹೆಚ್ಚು ಫಲಾನುಭವಿಗಳಿಗೆ ತಲುಪಿದ್ದು, ಶೇ 94% ಬಿಪಿಎಲ್ ಕುಟುಂಬಗಳು 5 ಕೆಜಿ ಉಚಿತ ಅಕ್ಕಿಯಿಂದ ಲಾಭ ಪಡೆದಿವೆ. ಈ ಯೋಜನೆಯ ಪರಿಣಾಮವಾಗಿ ಶೇ 64% ಜನರು ತಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡಿದ್ದು, ಶೇ 93% ಮಹಿಳೆಯರು ಕುಟುಂಬ ಸಂಬಂಧಗಳು ಉತ್ತಮವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅತ್ಯಲ್ಪವಾದ ಯುವನಿಧಿ ಯೋಜನೆ..!: ಯುವನಿಧಿ ಯೋಜನೆಯ ವ್ಯಾಪ್ತಿ ಅತ್ಯಲ್ಪವಾಗಿದ್ದು ಕೇವಲ ಶೇ 7% ಜನರಿಗೆ ಮಾತ್ರ ಲಾಭವಾಗಿದೆ. ಆದರೂ ಲಾಭ ಪಡೆದವರಲ್ಲಿ ಶೇ 51% ಮಂದಿ ತಮ್ಮ ಕೌಶಲ್ಯಾಭಿವೃದ್ಧಿಗಾಗಿ ತರಬೇತಿ ಕೇಂದ್ರಗಳಲ್ಲಿ ಸೇರಿರುವುದು ಹರ್ಷದ ವಿಷಯವಾಗಿದೆ.
ಆತ್ಮವಿಶ್ವಾಸ ತುಂಬಿದ ಗೃಹಲಕ್ಷ್ಮಿ: ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ಶೇ 78% ಮಹಿಳೆಯರು ಪಡೆದು, ಆಹಾರ, ವೈದ್ಯಕೀಯ ಮತ್ತು ಶಿಕ್ಷಣ ಖರ್ಚುಗಳಿಗೆ ಹಣ ಬಳಸುತ್ತಿದ್ದಾರೆ. ಜೊತೆಗೆ, ಶೇ 88% ಮಹಿಳೆಯರು ಮನೆಯೊಳಗಿನ ನಿರ್ಧಾರಗಳಲ್ಲಿ ಭಾಗವಹಿಸುವಷ್ಟು ಆತ್ಮವಿಶ್ವಾಸ ಹೊಂದಿದ್ದಾರೆ.
ಮನೆ ಮನೆ ಬೆಳಗಿದ ಗೃಹಜ್ಯೋತಿ ಯೋಜನೆ : ಗೃಹಜ್ಯೋತಿ ಯೋಜನೆಯು ಶೇ 82% ಮನೆಗಳಿಗೆ ತಲುಪಿದ್ದು, ಶೇ 74% ಕುಟುಂಬಗಳು ತಿಂಗಳಿಗೆ 500 ರೂ.ವರೆಗೆ ಉಳಿತಾಯ ಮಾಡುತ್ತಿದ್ದಾರೆ. ವಿದ್ಯುತ್ ಉಪಕರಣಗಳ ಬಳಕೆಯು ಶೇ 43% ಮನೆಗಳಲ್ಲಿ ಹೆಚ್ಚಾಗಿದೆ.
ಹೆಣ್ಣುಮಕ್ಕಳಿಗೆ ಶಕ್ತಿ ತುಂಬಿದ ಶಕ್ತಿ ಯೋಜನೆ : ಶಕ್ತಿ ಯೋಜನೆಯು ಹೆಣ್ಣುಮಕ್ಕಳಿಗೆ ನಿಜಕ್ಕೂ ‘ಶಕ್ತಿ’ ನೀಡಿದ್ದು, ಶೇ 96% ಮಹಿಳೆಯರು ಉಚಿತ ಬಸ್ ಪ್ರಯಾಣದಿಂದ ಪ್ರಯೋಜನ ಪಡೆದು, ಶೇ 46% ಜನರು ವಾರಕ್ಕೆ 250 ರೂ.ವರೆಗೆ ಉಳಿಸಿಕೊಂಡಿದ್ದಾರೆ. ಶೇ 72% ಮಹಿಳೆಯರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದಾರೆ ಎಂಬುದು ಸಮೀಕ್ಷೆಯ ವರದಿ.
ಜನರಿಗೆ ಈ ಯೋಜನೆಗಳ ಬಗ್ಗೆ ತಿಳಿದಿರುವ ಮಾರ್ಗಗಳ ಪೈಕಿ ಪತ್ರಿಕೆಗಳು, ಟಿವಿ ಜಾಹೀರಾತುಗಳು, ನೆರೆಹೊರೆಯವರು ಮತ್ತು ಸಾಮಾಜಿಕ ಮಾಧ್ಯಮ ಪ್ರಮುಖ ಪಾತ್ರವಹಿಸಿವೆ. ರಾಜಕೀಯ ಮುಖಂಡರ ಪ್ರಚಾರಗಳ ಪ್ರಭಾವ ಅತ್ಯಲ್ಪವಾಗಿರುವುದು ವಿಶೇಷ.
ಜಿಲ್ಲಾವಾರು ಫಲಾನುಭವಿಗಳ ಪ್ರಮಾಣ ನೋಡಿದರೆ, ಉತ್ತರ ಕರ್ನಾಟಕದ ಜಿಲ್ಲೆಗಳು ಬಹುಪಾಲು ಯೋಜನೆಗಳ ಪ್ರಯೋಜನ ಪಡೆಯಲು ಮುಂಚೂಣಿಯಲ್ಲಿವೆ. ಅನ್ನಭಾಗ್ಯದಲ್ಲಿ ಕಲಬುರಗಿ, ತುಮಕೂರು, ಹಾಸನ ಮುಂತಾದ ಜಿಲ್ಲೆಗಳು, ಗೃಹಲಕ್ಷ್ಮಿಯಲ್ಲಿ ಹಾಸನ, ಮಂಡ್ಯ, ಚಿಕ್ಕಮಗಳೂರು, ಬೆಳಗಾವಿ ಜಿಲ್ಲೆಗಳು ಹೆಚ್ಚು ಲಾಭ ಕಂಡಿವೆ. ಗೃಹಜ್ಯೋತಿ ಯೋಜನೆ ದಕ್ಷಿಣ ಕನ್ನಡ, ಕಲಬುರಗಿ, ವಿಜಯಪುರ ಮತ್ತು ತುಮಕೂರಿನಲ್ಲಿ ವ್ಯಾಪಕವಾಗಿ ತಲುಪಿದೆ. ಯುವನಿಧಿ ಯೋಜನೆಯು ಬೆಂಗಳೂರು, ಧಾರವಾಡ ಮತ್ತು ಮೈಸೂರಿನಲ್ಲಿ ಹೆಚ್ಚು ಪ್ರಸಾರ ಹೊಂದಿದೆ.
ವಿಶೇಷವಾಗಿ ಮಹಿಳೆಯರ ಭಾಗವಹಿಸುವಿಕೆ ಗಮನಾರ್ಹವಾಗಿದೆ. ಗೃಹಲಕ್ಷ್ಮಿ, ಗೃಹಜ್ಯೋತಿ ಮತ್ತು ಶಕ್ತಿ ಯೋಜನೆಗಳಲ್ಲಿ ಶೇ 70–75% ಫಲಾನುಭವಿಗಳು ಮಹಿಳೆಯರಾಗಿದ್ದು, ಪುರುಷರು ಶೇ 25–30% ಕ್ಕೆ ಸೀಮಿತವಾಗಿದ್ದಾರೆ. ಇದರಿಂದ ರಾಜ್ಯದ ಮಹಿಳಾ ಸಬಲೀಕರಣಕ್ಕೆ ಈ ಯೋಜನೆಗಳು ನೈಜ ದಿಕ್ಕು ತೋರಿಸುತ್ತಿವೆ.
ಕರಾವಳಿ ಕರ್ನಾಟಕದಲ್ಲಿ ಪ್ರತಿಪಕ್ಷ ಬಿಜೆಪಿ ಶಾಸಕರ ಸಂಖ್ಯೆಯು ಹೆಚ್ಚು ಇದ್ದರೂ, ಯೋಜನೆಗಳ ಜಾಗೃತಿ ಮಟ್ಟ ಹೆಚ್ಚಿನದ್ದಾಗಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಶೇ 85–88% ಜನರಿಗೆ ಕನಿಷ್ಠ ಮೂರಕ್ಕೂ ಹೆಚ್ಚು ಯೋಜನೆಗಳ ಬಗ್ಗೆ ಮಾಹಿತಿ ಇದೆ. ಆದರೆ, ಶೇ 55–60% ಜನರಷ್ಟೇ ನಿಯಮಿತವಾಗಿ ಉಪಯೋಗಿಸುತ್ತಿದ್ದಾರೆ. ಶಕ್ತಿ ಯೋಜನೆ ಈ ಜಿಲ್ಲೆಗಳಲ್ಲಿ ಭಾರೀ ಯಶಸ್ಸು ಕಂಡಿದ್ದು, ಶೇ 95% ಮಹಿಳೆಯರು ಬಸ್ ಸೇವೆ ಉಪಯೋಗಿಸುತ್ತಿದ್ದಾರೆ. ಇದರ ಜೊತೆಗೆ, ಗೃಹಜ್ಯೋತಿ ಯೋಜನೆಯು ಮಧ್ಯಮ ವರ್ಗದ ಜನರಲ್ಲಿ ಹೆಚ್ಚು ಆಸಕ್ತಿ ಗಳಿಸಿದ್ದು, ಮಂಗಳೂರಿನಲ್ಲಿ ಶೇ 95% ಮನೆಗಳು ಇದರ ಪ್ರಯೋಜನ ಪಡೆದಿವೆ.
ಒಟ್ಟಿನಲ್ಲಿ, ಐದು ಗ್ಯಾರಂಟಿ ಯೋಜನೆಗಳು ರಾಜ್ಯದ ಸಾಮಾಜಿಕ ಜಾಲವನ್ನು ಬಲಪಡಿಸುತ್ತಲೇ, ಮಹಿಳೆಯರ ಬದುಕಿನಲ್ಲಿ ನೈಜ ಬದಲಾವಣೆ ತರುತ್ತಿರುವುದು ಲೋಕನೀತಿ-CSDS ಸಮೀಕ್ಷೆಯ ವರದಿ ಸ್ಪಷ್ಟಪಡಿಸುತ್ತಿದೆ. ಈ ಯೋಜನೆಗಳು ಸರಿಯಾದ ಅನುಷ್ಠಾನದೊಂದಿಗೆ ಮುಂದೆ ರಾಜ್ಯದ ಬಡಜನರ ಸಬಲೀಕರಣದ ದೃಷ್ಟಿಕೋನವನ್ನು ರೂಪಿಸಲು ಸಹಕಾರಿಯಾಗಲಿವೆ ಎಂದು ಹೇಳಲಾಗಿದೆ.