ಮಂಡ್ಯ : ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಾಕುವ ಕೋಮುವಾದಿ ರಾಜಕಾರಣವನ್ನು ಮಾಡುತ್ತಿದೆ ಎಂದು ಮಾಜಿ ಸಚಿವ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಆರೋಪಿಸಿದ್ದಾರೆ.
ಜನಾಕ್ರೋಶ ಯಾತ್ರೆ ಸಂದರ್ಭದಲ್ಲಿ ಇಂದು ಇಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನ ಜನವಿರೋಧಿ, ಬೆಲೆ ಏರಿಕೆ, ಭ್ರಷ್ಟಾಚಾರದ ನೀತಿ ವಿರುದ್ಧ ಈ ಹೋರಾಟ ನಡೆಯುತ್ತಿದೆ ಎಂದರು.ಕೇಂದ್ರ ಸರಕಾರವು ಗ್ಯಾಸ್ ಸಿಲಿಂಡರ್‍ಗೆ 50 ರೂ. ಹೆಚ್ಚಿಸಿದೆ. ಬಿಜೆಪಿಯವರು ಕೇಂದ್ರದ ವಿರುದ್ಧ ಹೋರಾಟ ಮಾಡಲಿ ಎಂದು ಮುಖ್ಯಮಂತ್ರಿಗಳು ಹೇಳಿದ್ದನ್ನು ಪ್ರಸ್ತಾಪಿಸಿದ ಅವರು, ಮುಖ್ಯಮಂತ್ರಿಗಳೇ ಒಂದೂವರೆ ವರ್ಷದ ಹಿಂದೆ ಒಂದು ಸಿಲಿಂಡರ್ ಬೆಲೆ 1,113 ರೂ. ಇತ್ತು. ಪುಣ್ಯಾತ್ಮ ನರೇಂದ್ರ ಮೋದಿ ಒಂದು ಸಾರಿ 200 ರೂ. ಕಡಿಮೆ ಮಾಡಿದ್ದರು. ಮತ್ತೊಮ್ಮೆ 100 ರೂ. ಕಡಿಮೆ ಮಾಡಿದ್ದರು. ನಿನ್ನೆ 50 ರೂ. ಜಾಸ್ತಿ ಮಾಡಿದರೂ ಇನ್ನೂ 250 ರೂ. ಕಡಿಮೆ ಆಗಿದೆ ಎಂದು ಗಮನ ಸೆಳೆದರು.
ಪೆಟ್ರೋಲ್, ಡೀಸೆಲ್ ಬೆಲೆ 3 ರೂ. 93 ಪೈಸೆ ಒಮ್ಮೆ ಏರಿಸಿದ್ದ ರಾಜ್ಯವು ಇದೀಗ ಮತ್ತೆ 2 ರೂ. ಹೆಚ್ಚಿಸಿದೆ. ಆ ಪುಣ್ಯಾತ್ಮ ಕಡಿಮೆ ಮಾಡಿದ್ದರೆ, ಈ ಮನೆಹಾಳರು ರೇಟ್ ಜಾಸ್ತಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು. 9 ರೂ. ಹಾಲಿನ ದರ ಏರಿಸಿ ಸಬ್ಸಿಡಿ ಕೊಡುತ್ತಾರೆ ಅಂದುಕೊಂಡಿದ್ದೆವು. ಆದರೆ, ಹಾಲಿನ 700 ಕೋಟಿ ಸಬ್ಸಿಡಿ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಟೀಕಿಸಿದರು.