ಹುಬ್ಬಳ್ಳಿ: ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸಿಡಿದ ಪರಿಣಾಮ ಒಂಬತ್ತು ಅಯ್ಯಪ್ಪ ವ್ರತಧಾರಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿಯ ದೇವಸ್ಥಾನವೊಂದರಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ.
ಹುಬ್ಬಳ್ಳಿಯ ಸಾಯಿನಗರದಲ್ಲಿರುವ ಈಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ವ್ರತಧಾರಿಗಳ ಶಿಬಿರವಿದ್ದು, ಅಡುಗೆ ಮಾಡಲು ತಂದಿರಿಸಿದ್ದ ಸಿಲಿಂಡರ್ ಸ್ಫೋಟವಾಗಿದೆ.ಅಯ್ಯಪ್ಪ ವ್ರತಧಾರಿಗಳು ನಿದ್ರಿಸಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾಗಿ ದೀಪದ ಬೆಂಕಿ ತಗುಲಿ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ. ಗಾಯಗೊಂಡ 9 ಮಾಲಾಧಾರಿಗಳ ಸ್ಥಿತಿ ಚಿಂತಾಜನಕವಾಗಿದೆ.
ಗಾಯಗೊಂಡ ಮಾಲಾಧಾರಿಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಡಿಸಿಪಿ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.