ಹುಬ್ಬಳ್ಳಿ: ದೇವಸ್ಥಾನದಲ್ಲಿ ಸಿಲಿಂಡರ್ ಸ್ಫೋಟಿಸಿ ಗಂಭೀರವಾಗಿ ಗಾಯಗೊಂಡಿದ್ದ ಒಂಬತ್ತು ಅಯ್ಯಪ್ಪ ವ್ರತಧಾರಿಗಳ ಪೈಕಿ ಇನ್ನಿಬ್ಬರು ಕೊನೆಯುಸಿರೆಳೆಯುವುದರೊಂದಿಗೆ ಸಾವಿನ ಸಂಖ್ಯೆ 8ಕ್ಕೇರಿದೆ. ಈ ಅವಘಡದಲ್ಲಿ ಈಗ ಒಬ್ಬ ಗಾಯಾಳು ಮಾತ್ರ ಬಾಕಿ ಉಳಿದಿದ್ದು, ಅವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ಆಸ್ಪತ್ರೆ ಮೂಳಗಳು ತಿಳಿಸಿವೆ.
ಪ್ರಕಾಶ ಬಾರಕೇರ (42) ಎಂಬವರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಸೋಮವಾರ ರಾತ್ರಿ ತೇಜಸ್ವರ್ (27) ಎಂಬವರು ಮೃತಪಟ್ಟಿದ್ದರು. ಇದೀಗ 9 ಗಾಯಾಳುಗಳ ಪೈಕಿ 8 ಅಯ್ಯಪ್ಪ ವ್ರತಧಾರಿಗಳ ಸಾವಾಗಿದ್ದು, ಕಿಮ್ಸ್ನಲ್ಲಿ ಓರ್ವ ಗಾಯಾಳು ವ್ರತಧಾರಿಗೆ ಚಿಕಿತ್ಸೆ ಮುಂದುವರಿದಿದೆ.
ಹುಬ್ಬಳ್ಳಿಯ ಉಣಕಲ್‌ನ ಅಚ್ಚವ್ವನ ಕಾಲೋನಿಯ ಅಯ್ಯಪ್ಪನ ಸನ್ನಿಧಿಯಲ್ಲಿ ಸಂಭವಿಸಿದ್ದ ಭೀಕರ ಸಿಲಿಂಡರ್ ಸ್ಫೋಟದಲ್ಲಿ 9 ಮಂದಿ ಅಯ್ಯಪ್ಪ ವ್ರತಧಾರಿಗಳು ತೀವ್ರ ಸುಟ್ಟ ಗಾಯಗಳಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಬೆಂಗಳೂರಿನಿಂದ ತಜ್ಞ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದರೂ ಗಾಯಗೊಂಡವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಡಿಸೆಂಬರ್ 22ರಂದು ತಡರಾತ್ರಿ ವೇಳೆ ದೇವಸ್ಥಾನದಲ್ಲಿದ್ದ ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾದಾಗ ಉರಿಯುತ್ತಿದ್ದ ದೀಪದ ಬೆಂಕಿ ಹತ್ತಿಕೊಂಡು ಸಿಲಿಂಡರ್ ಸ್ಫೋಟಿಸಿತ್ತು. ದೇವಸ್ಥಾನದಲ್ಲಿ ಮಲಗಿದ್ದ 9 ಅಯ್ಯಪ್ಪ ವ್ರತಧಾರಿಗಳು ತೀವ್ರ ಸುಟ್ಟಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದರು.