ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಗೂ ಮುನ್ನ ಆರ್.ಆರ್.ನಗರದಲ್ಲಿರುವ ಆರೋಪಿ ವಿನಯ್ ಒಡೆತನದ ಸ್ಟೋನಿ ಬ್ರೂಕ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ನಟ ದರ್ಶನ್ ಗ್ಯಾಂಗ್ ಮದ್ಯಪಾರ್ಟಿ ನಡೆಸಿದ್ದು, ಪಾರ್ಟಿಯಲ್ಲಿ ಹಾಸ್ಯನಟ ಚಿಕ್ಕಣ್ಣ ಭಾಗಿಯಾಗಿರುವುದು ಕಂಡು ಬಂದಿದ್ದು, ಈ ಸಂಬಂಧ ಪೊಲೀಸರು ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಹತ್ಯೆಗೂ ಮುನ್ನ ದರ್ಶನ್ ಹಾಗೂ ಸಹಚರರು ರೆಸ್ಟೋರೆಂಟ್ ನಲ್ಲಿ ಮದ್ಯಸೇವಿಸಿದ್ದರು. ಮದ್ಯದ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಎಂಬುವರು ಜೊತೆಗಿದ್ದರು. ಬಳಿಕ ರೇಣುಕಾಸ್ವಾಮಿ ಪಟ್ಟಣಗೆರೆ ಶೆಡ್ ನಲ್ಲಿ ಕರೆದುಕೊಂಡು ಬಂದಿರುವ ವಿಷಯ ತಿಳಿಯುತ್ತಿದ್ದಂತೆ ಆತನ ಗ್ಯಾಂಗ್ ಅಲ್ಲಿಗೆ ತೆರಳಿತ್ತು. ಇದಕ್ಕೂಮುನ್ನ ಚಿಕ್ಕಣ್ಣ ಕೆಲಸ ನಿಮಿತ್ತ ಹೊರಗೆ ತೆರಳಿದ್ದರು ಎಂದು ಗೊತ್ತಾಗಿದೆ. ಡಿ ಗ್ಯಾಂಗ್ ಸದಸ್ಯರು ಮದ್ಯಪಾರ್ಟಿಯಲ್ಲಿ ರೇಣುಕಾಸ್ವಾಮಿ ಹತ್ಯೆ ಕುರಿತಂತೆ ಏನಾದರೂ ಮಾತುಕತೆ ನಡೆಸಿದ್ದರಾ ? ಒಂದು ವೇಳೆ ಮಾತನಾಡಿದ್ದರೆ ಯಾರೆಲ್ಲಾ ಏನು ಮಾತನಾಡಿದ್ದರು ಎಂಬುದನ್ನ ಅರಿಯಲು ಚಿಕ್ಕಣ್ಣಗೆ ನೋಟಿಸ್ ನೀಡಲಾಗಿದೆ. ವಿಚಾರಣೆ ಹಾಜರಾಗಿ ಹೇಳಿಕೆ ನೀಡಿದರೆ ಸಾಕ್ಷಿಯಾಗಿ ಪರಿಗಣಿಸುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೊಲೆಗೂ ಮುನ್ನ ರೆಸ್ಟೋರೆಂಟ್ ಪಾರ್ಟಿ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎಷ್ಟು ಗಂಟೆಗೆ ಬಂದು ಎಷ್ಟು ಗಂಟೆಗೆ ರೆಸ್ಟೋರೆಂಟ್ ನಿಂದ ನಿರ್ಗಮಿಸಿರುವುದು ಗೊತ್ತಾಗಿದೆ. ಹೀಗಾಗಿ ದರ್ಶನ್ ಹಾಗೂ ಸಹಚರರನ್ನ ಕರೆದೊಯ್ದು ಮಹಜರಿಗೆ ಒಳಪಡಿಸಿದ್ದಾರೆ. ಇದೇ ಸ್ಥಳದಲ್ಲಿ ನಟ ಚಿಕ್ಕಣ್ಣ ಕೂಡ ಮಹಜರ್ ಪ್ರಕ್ರಿಯೆಯಲ್ಲಿ ಒಳಪಟ್ಟಿದ್ದಾರೆ.