ದಾವಣಗೆರೆ: ಡಾ;ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯಕ್ಕೆ ತನ್ನದೇ ಆದ ಬಹುದೊಡ್ಡ ಕೊಡುಗೆ ನೀಡುವ ಮೂಲಕ ತಾನೇ ಉರಿದು ಜಗತ್ತಿಗೆ ಬೆಳಕು ನೀಡಿದ ಮಹಾನ್ ಚೇತನವಾಗಿದ್ದಾರೆ ಎಂದು ಡಾ.ಬಸವಪ್ರಭು ಸ್ವಾಮೀಜಿ ಬಣ್ಣಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಡಾ.ಫ.ಗು.ಹಳಕಟ್ಟಿ ಅವರ ದಿನಾಚರಣೆಯಲ್ಲಿ ಫ.ಗು.ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಹಳಕಟ್ಟಿ ಹಾಗೂ ಅವರ ವಚನಗಳ ಸಂಗ್ರಹ ಸೂರ್ಯ, ಚಂದ್ರ ಇರುವವರೆಗೂ ಅಜರಾಮರವಾಗಿ ಉಳಿಯಲಿದೆ. ವಚನ ಸಾಹಿತ್ಯ ಬೆಳದದ್ದೇ ಇವರಿಂದ. ಅದಕ್ಕೆ ಅವರು ತಮ್ಮ ಜೀವನದ ದುಡಿಮೆಯನ್ನೆಲ್ಲಾ ವಚನ ಸಾಹಿತ್ಯ ಮೇಲೆ ಬೆಳಕು ಚೆಲ್ಲಲು ಮುದ್ರಿಸಿ ಪ್ರಚಾರಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ವಿಜಾಪುರದ ಗೋಳಗುಮ್ಮಟ ಒಂದು ಬಾರಿ ಕೂಗಿದಲ್ಲಿ 7 ಬಾರಿ ಪ್ರತಿಧ್ವನಿಸುತ್ತದೆ. ಆದರೆ ವಚನ ಸಾಹಿತ್ಯವು ಪ್ರತಿ ಕನ್ನಡಿಗನನ್ನು ಪ್ರತಿಧ್ವಿಸುತ್ತದೆ ಎಂಬ ನಂಬಿಕೆಯಿಂದ ವಚನ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಈ ಮೂಲಕ ತಾನೇ ಉರಿದು ಜಗತ್ತಿಗೆ ಬೆಳಕು ನೀಡಿದವರು ಡಾ; ಫ.ಗು.ಹಳಕಟ್ಟಿಯವರು ಎಂದರು.
ಹಳಕಟ್ಟಿಯವರ ವಚನ ಸಾಹಿತ್ಯದ ಬದ್ದತೆ, ನಿಷ್ಠೆ, ಪ್ರಾಮಾಣಿಕತೆ ನಮಗೆಲ್ಲರಿಗೂ ಮಾದರಿ. ಜೀವನದಲ್ಲಿನ ಪ್ರತಿ ಸಮಸ್ಯೆಗೆ ವಚನ ಸಾಹಿತ್ಯದಲ್ಲಿ ಪರಿಹಾರವಿದೆ ಎಂದು ಕಟ್ಟಿಕೊಟ್ಟ ಕೀರ್ತಿಯೂ ಅವರಿಗೆ ಸಲ್ಲುತ್ತದೆ ಎಂದ ಅವರು, ಫ.ಗು.ಹಳಕಟ್ಟಿಯವರ ಜೀವನ ತತ್ವಾದರ್ಶ, ಆದರ್ಶಯುತ ಬದುಕು ನಮಗೆಲ್ಲರಿಗೂ ದಾರಿದೀಪವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಉಪವಿಭಾಗಾಧಿಕಾರಿ ಸಂತೋಷ್ ಪಾಟೀಲ್ ಮಾತನಾಡಿ, ವಚನ ಸಾಹಿತ್ಯ ಲೋಕಕ್ಕೆ ಹಲವು ಶರಣರು ನೀಡಿರುವ ಕೊಡುಗೆಯನ್ನು ಕಾಣಬಹುದು. ಆದರೆ ಅವುಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ವಚನಗಳನ್ನು ಕಟ್ಟಿಕೊಟ್ಟಿದ್ದು ಫ.ಗು.ಹಳಕಟ್ಟಿಯವರು. ಅವರ ವಚನ ಸಾಹಿತ್ಯದಲ್ಲಿನ ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಲ್ಲದೇ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಮಾಡಬೇಕಿದೆ ಎಂದರು.
ದೂಡ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ನಮ್ಮ ಸಂಸ್ಕøತಿ, ಸಂಸ್ಕಾರ, ಧಾರ್ಮಿಕತೆ ಹಾಗೂ ವಚನ ಸಾಹಿತ್ಯಾಸಕ್ತಿ ಕುಂದುತ್ತಿದೆ. ಇದಕ್ಕೆ ಮುಖ್ಯ ಕಾರಣ ಮಾಹಿತಿ ಮತ್ತು ಸಂಸ್ಕಾರದ ಕೊರತೆ. ಆದ್ದರಿಂದ ಇಂತಹ ಮಹಾನ್ ಶರಣರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸದೇ ಪ್ರತಿ ಶಾಲಾ ಕಾಲೇಜುಗಳಲ್ಲಿ ಆಚರಿಸುವ ಮೂಲಕ ಅವರ ಆದರ್ಶಬದುಕು, ತತ್ವಾದರ್ಶಗಳನ್ನು ಯುವ ಪೀಳೀಗೆಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎವಿಕೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ರಣಧೀರ್ ಫ.ಗು.ಹಳಕಟ್ಟಿಯವರ ಕುರಿತು ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಬಸವರಾಜ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಾಮದೇವಪ್ಪ, ಗೌರವ ಕಾರ್ಯದರ್ಶಿ ದಿಳ್ಳೆಪ್ಪ, ಅಖಿಲ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ವಿ.ಪರಮೇಶ್ವರಪ್ಪ, ಹಾಗೂ ಐಗೂರು ಚಂದ್ರಶೇಖರ್, ವೀಣಾ ಮಂಜುನಾಥ್, ಶಶಿಧರ್ ಬಸಾಪುರ ಸೇರಿದಂತೆ ಸಮಾಜದ ಮುಖಂಡರು ಇದ್ದರು.