ಬೆಂಗಳೂರು : ಕಳೆದ ಐದು ವರ್ಷದ ಅವಧಿಯಲ್ಲಿ ರಾಜ್ಯಾದ್ಯಂತ 14 ಸಾವಿರಕ್ಕಿಂತ ಹೆಚ್ಚು ಮಕ್ಕಳ ಅಪಹರಣವಾಗಿದ್ದು, ಈ ಪೈಕಿ 1,336 ಮಕ್ಕಳ ಅಪಹರಣ ಪ್ರಕರಣಗಳು ಇನ್ನೂ ನಿಗೂಢವಾಗಿ ಉಳಿದಿವೆ ಎಂದು ಗೃಹಸಚಿವ ಜಿ.ಪರಮೇಶ್ವರ್ ಮಂಗಳವಾರ ವಿಧಾನ ಪರಿಷತ್‌ನಲ್ಲಿ ತಿಳಿಸಿದ್ದಾರೆ. ಕಿಡ್ನಾಪ್ ಹಾಗೂ ನಿಗೂಢವಾಗಿ ನಾಪತ್ತೆಯಾದವರ ಪೈಕಿ ಹೆಣ್ಣು ಮಕ್ಕಳೇ ಹೆಚ್ಚು. ಮಕ್ಕಳ ನಾಪತ್ತೆ ಪ್ರಕರಣದಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದ್ದರೆ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿವೆ.
ರಾಜ್ಯದಲ್ಲಿ ಮಕ್ಕಳ ಅಪಹರಣವು ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಈ ವರ್ಷ ಜುಲೈ ಅಂತ್ಯಕ್ಕೆ 2,170 ಮಕ್ಕಳು ನಾಪತ್ತೆಯಾಗಿದ್ದಾರೆ. ಅದರಲ್ಲೂ ಕಿಡ್ನಾಪ್ ಹಾಗೂ ನಿಗೂಢ ಆದವರ ಪೈಕಿ ಹೆಣ್ಣು ಮಕ್ಕಳೇ ಹೆಚ್ಚಿರುವುದು ಕಳವಳಕಾರಿಯಾಗಿದೆ.
2020ರಿಂದ ಈವರೆಗೂ ರಾಜ್ಯದಲ್ಲಿ 14,878 ಮಕ್ಕಳು ನಾಪತ್ತೆ ಪ್ರಕರಣ ದಾಖಲಾಗಿದ್ದು, ಈ ಪೈಕಿ 13,542 ಪ್ರಕರಣಗಳಲ್ಲಿ ಮಕ್ಕಳು ಪೋಷಕರ ಮಡಿಲಿಗೆ ಸೇರಿದ್ಧಾರೆ. ಬಾಕಿ 1,336 ಮಕ್ಕಳು ಪತ್ತೆಯಾಗಿಲ್ಲ. ಅಪಹರಣಕ್ಕೆ ಒಳಗಾದ 10,792 ಹೆಣ್ಣು ಮಕ್ಕಳ ಪೈಕಿ 1,003 ಮಂದಿ ಮತ್ತು 4,086 ಗಂಡು ಮಕ್ಕಳ ಪೈಕಿ 333 ಮಕ್ಕಳು ಇನ್ನೂ ಸಿಕ್ಕಿಲ್ಲ. ಅಪಹರಣ ಪ್ರಕರಣದಲ್ಲಿ ಐದು ವರ್ಷದಲ್ಲಿ 634 ಅಪಹರಣಕಾರರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಬಾಲ ಕಾರ್ಮಿಕರಾಗಿ ದುಡಿಸಲು ಮಕ್ಕಳ ಅಪಹರಣ ಮಾಡಲಾಗುತ್ತಿದೆ. ಹಣದಾಸೆ ತೋರಿಸಿ ವೇಶ್ಯಾವಾಟಿಕೆ ಜಾಲಕ್ಕೆ ತಳ್ಳುವುದು. ಸೋಷಿಯಲ್ ಮೀಡಿಯಾ ಪ್ರಭಾವದಿಂದ ಪ್ರೀತಿ-ಪ್ರೇಮ ಸೆಳೆತಕ್ಕೆ ಒಳಗಾಗಿ ನಾಪತ್ತೆಯಾಗುವುದು, ಅಂಗಾಂಗ ಮಾರಾಟ ದಂಧೆ, ಭಿಕ್ಷಾಟನೆಯಲ್ಲಿ ತೊಡಗಿಸಲು ಮಕ್ಕಳ ಅಪಹರಣ ಮಾಡಲಾಗುತ್ತಿದೆ ಎಂಬ ವಿಚಾರ ಬಯಲಾಗಿದೆ.