ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಇಂದು ಬೆಂಗಳೂರಿನ ಸಿಸಿಎಚ್ 57ನೇ ನ್ಯಾಯಾಲಯದಲ್ಲಿ ನಡೆಯಿತು. ವಿಚಾರಣೆಗೆ ಎ1 ಆರೋಪಿ ಪವಿತ್ರಾ ಗೌಡ ಹಾಗೂ ಇನ್ನೂ ಕೆಲವು ಆರೋಪಿಗಳು ಹಾಜರಾಗಿದ್ದರು. ಆದರೆ ನಟ ದರ್ಶನ್ ನ್ಯಾಯಾಲಯಕ್ಕೆ ಹಾಜರಾಗದೆ ಗೈರಾಗಿದ್ದರು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್, ‘ವಿಚಾರಣೆ ಇದ್ದಾಗ ಕಡ್ಡಾಯವಾಗಿ ಹಾಜರಾಗಬೇಕು’ ಎಂದು ದರ್ಶನ್ ಪರ ವಕೀಲರಿಗೆ ಎಚ್ಚರಿಕೆ ನೀಡಿದೆ.
ಇತ್ತೀಚೆಗಷ್ಟೆ ‘ಡೆವಿಲ್’ ಸಿನಿಮಾದ ಶೂಟಿಂಗ್‌ಗಾಗಿ ನಟ ದರ್ಶನ್ ರಾಜಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಸುಮಾರು 28 ಗಂಟೆಗಳ ಕಾಲ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು ಎನ್ನಲಾಗಿದೆ. ಇದರಿಂದಾಗಿ ಅವರಿಗೆ ಬೆನ್ನು ನೋವು ಉಲ್ಬಣವಾಗಿತ್ತು. ಹೀಗಾಗಿ ಬೆನ್ನು ನೋವಿನ ಕಾರಣ ನೀಡಿ ನ್ಯಾಯಾಲಯದ ವಿಚಾರಣೆಯಿಂದ ವಿನಾಯಿತಿ ಕೇಳಿದ್ದರು. ಅದರಂತೆ ಅವರ ಪರ ವಕೀಲರು ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.
ಹೈಕೊರ್ಟ್ ಜಾಮೀನು ಷರತ್ತಿನಲ್ಲಿ ಬೆಂಗಳೂರು ವ್ಯಾಪ್ತಿ ಬಿಟ್ಟು ತೆರಳಲು ಅನುಮತಿ ನೀಡಿತ್ತು ಎಂದು ತಿಳಿಸಿ ಆದೇಶ ಪ್ರತಿಯನ್ನು ನ್ಯಾಯಾಧೀಶರಿಗೆ ವಕೀಲರು ನೀಡಿದರು. ಆದರೆ ಸಮಜಾಯಿಷಿಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ವಿಚಾರಣೆ ವೇಳೆ ಆರೋಪಿಗಳು ಕಡ್ಡಾಯವಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ನಿರ್ದೇಶಿಸಿದರು.
ಇನ್ನು ವಿಚಾರಣೆಗೆ ಹಾಜರಾದ ಕೆಲ ಆರೋಪಿಗಳು, ಪೊಲೀಸರು ವಶಪಡಿಸಿಕೊಂಡಿರುವ ತಮ್ಮ ಮೊಬೈಲ್‌ಗಳನ್ನು ಮರಳಿಸಬೇಕು ಎಂದು ಮನವಿ ಸಲ್ಲಿಸಿದರು. ಬಳಿಕ ವಿಚಾರಣೆಯನ್ನು ಮೇ 20ಕ್ಕೆ ಮುಂದೂಡಲಾಯಿತು.