ಚಿತ್ರದುರ್ಗ: ದಾವಣಗೆರೆ-ಚಿತ್ರದುರ್ಗ ನಡುವಿನ ನೇರ ರೈಲ್ವೇ ಮಾರ್ಗ ಕಾಮಗಾರಿ 2027ರ ಜೂನ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಇದರ ಜೊತೆಗೆ 2027ರ ಡಿಸೆಂಬರ್ ಅಂತ್ಯದ ವೇಳೆಗೆ ದಾವಣಗೆರೆ-ಚಿತ್ರದುರ್ಗ-ತುಮಕೂರು, ರಾಯದುರ್ಗ-ತುಮಕೂರು, ಗದಗ-ವಾಡಿ ಸೇರಿದಂತೆ ಹಲವು ರೈಲ್ವೆ ಮಾರ್ಗಗಳನ್ನು ಪೂರ್ಣಗೊಳಿಸಿ ಜನರ ಸೇವೆಗೆ ಅನುವು ಮಾಡಿಕೊಡಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಗುರುವಾರ ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಹೋಬಳಿಯ ಹಂಪನೂರು ಗ್ರಾಮದ ಬಳಿ ನೂತನ ರೈಲ್ವೆ ಕಾಮಗಾರಿಗಳ ಪ್ರಗತಿಯನ್ನು ವೀಕ್ಷಿಸಿದ ಬಳಿಕ ಕೇಂದ್ರ ಸಚಿವ ವಿ.ಸೋಮಣ್ಣ ಮಾಧ್ಯಮದವರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಈ ನೂತನ ರೈಲ್ವೆ ಯೋಜನೆಯ ಭೌತಿಕ ಕಾಮಗಾರಿ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಇಲ್ಲಿಯವರೆಗೆ ಜಿಲ್ಲೆಯಲ್ಲಿ ಕೇವಲ 8-9% ರಷ್ಟು ಮಾತ್ರ ಕೆಲಸವಾಗಿದೆ. 2027ರ ಜನವರಿ ವೇಳೆಗೆ ಭರಮಸಾಗರ ವರೆಗಿನ ಹಾಗೂ ಜೂನ್ ವೇಳೆಗೆ ಚಿತ್ರದುರ್ಗದ ವರೆಗಿನ ರೈಲ್ವೆ ಮಾರ್ಗದ ಕಾಮಗಾರಿ ಪೂರ್ಣಗೊಳಿಸಿ, ರೈಲು ಸಂಚಾರಕ್ಕೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ ಎಂದರು






























