ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಕಳೆದ ಮೂರು ತಿಂಗಳಿನಿಂದ ಫಲಾನುಭವಿಗಳಿಗೆ ನೀಡಿಲ್ಲ ಎಂದು ವಿಪಕ್ಷಗಳು ಟೀಕೆ ಮಾಡುತ್ತಿದ್ದು, ಈ ಕುರಿತಂತೆ ಡಿಸಿಎಂ ಡಿಕೆ ಶಿವಕುಮಾರ್ ಇಂದು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ ಹಣ ಹಾಕುವುದು ಸ್ವಲ್ಪ ತಡವಾಗಿದೆ. ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ ವರ್ಗಾಹಿಸಿಲ್ಲ. ಆದರೆ ಸರ್ಕಾರ ಮಾತು ಕೊಟ್ಟಂತೆ ಎರಡು ಯೋಜನೆಗಳ ಹಣವನ್ನು ಖಾತೆಗಳಿಗೆ ಹಾಕುತ್ತೇವೆ ಎಂದು ಆಶ್ವಾಸನೆ ನೀಡಿದರು. ಇನ್ನುಂದೆ ತಿಂಗಳಿಗೆ ಸರಿಯಾಗಿ ಹಣ ವರ್ಗಾವಣೆಯಾಗಲಿದೆ ಎಂದರು.
ಇದಕ್ಕೂ ಮೊದಲು ಈ ಬಗ್ಗೆ ಪ್ರತಿಕ್ರಿಯಿಸಿದ್ದ ಆಹಾರ ಸಚಿವ ಕೆ.ಎಚ್ ಮುನಿಯಪ್ಪ, ವಿಪಕ್ಷಗಳು ಟೀಕಿಸುತ್ತಿರುವಂತೆ ನಾಲ್ಕೈದು ತಿಂಗಳ ಗ್ಯಾರಂಟಿ ಹಣ ಬಾಕಿ ಇಲ್ಲ. ಕೇವಲ ಎರಡು ತಿಂಗಳ ಹಣ ಮಾತ್ರ ಬಾಕಿ ಇದೆ. ಎರಡು ತಿಂಗಳಿಗೊಮ್ಮೆ ಹಣ ಹಾಕುತ್ತಿದ್ದೇವೆ. ಇನ್ನ ಮೇಲೆ ಪ್ರತಿ ತಿಂಗಳು ಹಣ ವರ್ಗಾವಣೆಗೆ ವ್ಯವಸ್ಥೆ ಮಾಡುತ್ತೇವೆ ಎಂದರು.