ಯುವ ಜನತೆಯ ಉಜ್ವಲ ಭವಿಷ್ಯಕ್ಕೆ ಸಹಕಾರ, ಉತ್ತೇಜನ ನೀಡಿ: ಡಿ. ಸುಧಾಕರ್

WhatsApp
Telegram
Facebook
Twitter
LinkedIn

 

ಚಿತ್ರದುರ್ಗ: ಜಿಲ್ಲೆಯ ಯುವ ಜನತೆಗೆ ಉಜ್ವಲ ಭವಿಷ್ಯ ರೂಪಿಸಲು ವಿವಿಧ ಕಂಪನಿಗಳು ಅಗತ್ಯ ಸಹಕಾರ ಹಾಗೂ ಉತ್ತೇಜನ ನೀಡಬೇಕು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಹೇಳಿದರು.

ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಶನಿವಾರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಇವರ ಸಂಯುಕ್ತಾಶ್ರಯದಲ್ಲಿ ಕೌಶಲ್ಯ ರೋಜಗಾರ್ ಮೇಳ-ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯೋಗ ಮೇಳದಲ್ಲಿ 50 ಕ್ಕೂ ಹೆಚ್ಚು ವಿವಿಧ ಕಂಪನಿಗಳು ಭಾಗವಹಿಸಿರುವುದು ತುಂಬಾ ಸಂತೋಷದ ವಿಚಾರ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಯುವ ಜನರು ಪ್ರತಿಭಾವಂತರಿದ್ದು, ಅವರ ಪ್ರತಿಭೆಯನ್ನು ಸದುಪಯೋಗ ಪಡಿಸಿಕೊಂಡು ಯುವ ಜನರ ಜೀವನೋಪಾಯಕ್ಕೆ ಅಡಿಗಲ್ಲಾಗಲು ಸಹಾಯ ಮಾಡಬೇಕು ಎಂದು ಹೇಳಿದರು.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆ ಅಡಿಯಲ್ಲಿ ಪದವೀಧರರಿಗೆ ರೂ.3000/- ಹಾಗೂ ಡಿಪ್ಲೊಮಾ ಪದವೀಧರರಿಗೆ ರೂ.1500/- ನಿರುದ್ಯೋಗ ಭತ್ಯೆ ನೀಡಲಾಗುತ್ತಿದ್ದು, ಈ ಯುವನಿಧಿಯು ಯುವ ಜನರಿಗೆ ವರದಾನವಾಗಿದೆ.  ಭತ್ಯೆಯನ್ನು ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಇಂತಹ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಕೂಡ ಬಳಸುತ್ತಿದ್ದಾರೆ.  ಈ ಯೋಜನೆ ಯುವ ಜನತೆಗೆ ಬಹಳ ಅನುಕೂಲವಾಗಿದೆ.  ಜಿಲ್ಲೆಯ ಅಭ್ಯರ್ಥಿಗಳು ಸರ್ಕಾರ ಏರ್ಪಡಿಸುವ ಇಂತಹ ಉದ್ಯೋಗ ಮೇಳದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಇದರ ಸದುಪಯೋಗ ಪಡಿಸಿಕೊಂಡು, ತಮ್ಮ ಬದುಕು ರೂಪಿಸಿಕೊಳ್ಳಬೇಕು ಎಂದರು.

ಯುವ ಜನರಿಂದ ಉತ್ತಮ ಪ್ರತಿಕ್ರಿಯೆ: ವಿದ್ಯಾರ್ಹತೆಗೆ ತಕ್ಕ ಕೆಲಸ ಹುಡುಕಿ ದುಡಿಮೆಯ ಜೀವನ ಪ್ರಾರಂಭಿಸುವ ನಿರೀಕೆಯಲ್ಲಿದ್ದ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಮೇಳ ಸೂಕ್ತ ವೇದಿಕೆ ಕಲ್ಪಿಸಿತು. ಉದ್ಯೋಗ ಮೇಳಕ್ಕೆ ಯುವ ಜನರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಯಿತು.

ಉದ್ಯೋಗ ಮೇಳದಲ್ಲಿ ವಿವಿಧ ಕಂಪನಿಗಳು ಸೇರಿ 50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಉದ್ಯೋಗಾಕಾಂಕ್ಷಿಗಳು ತಮ್ಮ ಇಷ್ಟದ ಕೆಲಸಗಳ ಬಗ್ಗೆ ಕಂಪನಿಗಳಿಂದ ಮಾಹಿತಿ ಪಡೆದು ಸೂಕ್ತ ಎನಿಸಿದ ಕಂಪನಿಗಳಿಗೆ ಸ್ವ-ವಿವರ ಸಲ್ಲಿಸಿದರು. ಕೆಲವು ಕಂಪನಿಗಳು ಸ್ಥಳದಲ್ಲಿಯೇ ಅಭ್ಯರ್ಥಿಗಳ ಸಂದರ್ಶನ ನಡೆಸಿ, ವಿದ್ಯಾರ್ಹತೆ, ಪ್ರತಿಭೆಗೆ ಅನುಗುಣವಾಗಿ ಸ್ಥಳದಲ್ಲಿಯೇ ಉದ್ಯೋಗ ನೇಮಕ ಪತ್ರ ನೀಡಿದರೆ, ಕೆಲವು ಅಭ್ಯರ್ಥಿಗಳ ಹೆಸರುಗಳನ್ನು ಕಂಪನಿಗಳು ಅಂತಿಮ ಪಟ್ಟಿಯಲ್ಲಿ ಸಿದ್ಧಪಡಿಸಿಕೊಂಡು, ಒಂದು ವಾರದಲ್ಲಿ ನೇಮಕಾತಿ ಪತ್ರ ನೀಡುವ ಭರವಸೆ ನೀಡಿವೆ.

ಉದ್ಯೋಗಮೇಳದಲ್ಲಿ ಜಿಲ್ಲೆಯಿಂದ ಹಾಗೂ ವಿವಿಧೆಡೆಗಳಿಂದ 961 ಯುವಕರು ಹಾಗೂ 701 ಯುವತಿಯರು ಸೇರಿದಂತೆ ಒಟ್ಟು 1662 ಅಭ್ಯರ್ಥಿಗಳು ನೊಂದಣಿ ಮಾಡಿಕೊಂಡಿದ್ದು, ಈ ಪೈಕಿ 1478 ಅಭ್ಯರ್ಥಿಗಳು ವಿವಿಧ ಕಂಪನಿಗಳು ನಡೆಸಿದ ಸಂದರ್ಶನಕ್ಕೆ ಹಾಜರಾದರು.  ಒಟ್ಟು 829 ಅಭ್ಯರ್ಥಿಗಳು ನೇಮಕಾತಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದು, ಇದರಲ್ಲಿ 272 ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಕೆಲವು ಕಂಪನಿಗಳು ನೇಮಕಾತಿ ಪತ್ರವನ್ನು ನೀಡಿ, ಉದ್ಯೋಗ ಕಲ್ಪಿಸಿದರೆ, 572 ಅಭ್ಯರ್ಥಿಗಳು ವಿವಿಧ ಕಂಪನಿಗಳ ನೇಮಕದ ಅಂತಿಮ ಪಟ್ಟಿಯಲ್ಲಿ ಸೇರ್ಪಡೆಗೊಂಡು, ಒಂದೆರಡು ವಾರದೊಳಗೆ ಉದ್ಯೋಗದ ಪತ್ರ ಪಡೆಯಲಿದ್ದಾರೆ.

ವ್ಯವಸ್ಥಿತ ಆಯೋಜನೆ:  ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದ ಬೃಹತ್ ಉದ್ಯೋಗಮೇಳ ಶಿಸ್ತುಬದ್ಧವಾಗಿ ಹಾಗೂ ವ್ಯವಸ್ಥಿತವಾಗಿ ನಡೆಯಿತು. ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗಾಗಿ ಹೆಚ್ಚಿನ ಮಳಿಗೆಗಳನ್ನು ತೆರೆಯುವ ಮೂಲಕ ಅಚ್ಚುಕಟ್ಟಾಗಿ ನೊಂದಣಿ ಪ್ರಕ್ರಿಯೆ ನಡೆಸಲಾಯಿತು. ಮುಂಜಾನೆಯಿಂದಲೇ ನೊಂದಣಿ ಪ್ರಕ್ರಿಯೆ ಪ್ರಾರಂಭಿಸಲಾಯಿತು. ಅಭ್ಯರ್ಥಿಗಳು ಆಸಕ್ತ ಕಂಪನಿಗಳಲ್ಲಿ ಸಂದರ್ಶನಕ್ಕೆ ಹಾಜರಾಗಲು ಟೋಕನ್ ವ್ಯವಸ್ಥೆ ಮಾಡಲಾಗಿತ್ತು.  ಮಾಹಿತಿಗಾಗಿ ವಿವಿಧ ಕಂಪನಿಗಳ ಹೆಸರು, ಉದ್ಯೋಗದ ವಿವರ, ವಿದ್ಯಾರ್ಹತೆ, ಖಾಲಿ ಹುದ್ದೆಗಳ ಮಾಹಿತಿ ಸೇರಿದಂತೆ ಅಗತ್ಯ ಮಾಹಿತಿಯನ್ನು ಪ್ರದರ್ಶನ ಫಲಕಗಳ ಮೂಲಕ ಮಾಹಿತಿ ಪ್ರದರ್ಶಿಸುವ ವ್ಯವಸ್ಥೆ ಮಾಡಲಾಗಿತ್ತು.

ಅಭ್ಯರ್ಥಿಗಳಿಗೆ ಶುದ್ಧ ಕುಡಿಯುವ ನೀರು, ಆಸನದ ವ್ಯವಸ್ಥೆ ಹಾಗೂ ವಿಶೇಷ ಚೇತನ ಅಭ್ಯರ್ಥಿಗಳಿಗೆ ವಿಶೇಷ ಆಸನಗಳ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಅಚ್ಚುಕಟ್ಟಾಗಿ ಉದ್ಯೋಗ ಮೇಳ ನಿರ್ವಹಿಸಲಾಯಿತು.  ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಗಾಯತ್ರಿ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ವೇಮಣ್ಣ ಅವರು ಉದ್ಯೋಗಮೇಳದ ಯಶಸ್ವಿ ಆಯೋಜನೆಗೆ ವಿಶೇಷ ಆಸಕ್ತಿ ವಹಿಸಿ, ವ್ಯವಸ್ಥಿತ ನಿರ್ವಹಣೆಗೆ ಶ್ರಮ ವಹಿಸಿದರು.

ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ 5 ಜನರಿಗೆ ಉದ್ಯೋಗ ನೇಮಕಾತಿ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ವಿತರಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಸಿ. ವೀರೇಂದ್ರ ಪಪ್ಪಿ, ಟಿ. ರಘುಮೂರ್ತಿ, ಎಂ. ಚಂದ್ರಪ್ಪ, ವಿಧಾನಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಸೂರಜ್ ಎಂ.ಎನ್. ಹೆಗಡೆ,  ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ತಾಲ್ಲೂಕು ಅಧ್ಯಕ್ಷ ಪ್ರಕಾಶ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯ್ಕ್, ಕೆ. ಜಗದೀಶ್ ಸೇರಿದಂತೆ ಮತ್ತಿತರೆ ಗಣ್ಯರು, ಉದ್ಯೋಗಾಕಾಂಕ್ಷಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon