ಉಡುಪಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಚತುರ್ಥ ಪರ್ಯಾಯ ವಿಶ್ವ ಗೀತಾ ಪರ್ಯಾಯದ ಪವಿತ್ರ ಕೋಟಿ ಗೀತಾ ಲೇಖನ ಯಜ್ಞದ ಸ್ಮರಣಿಕೆಯಾಗಿ ಮತ್ತು ತಮ್ಮ 50 ವರ್ಷಗಳ ಸನ್ಯಾಸ ಜೀವನದ ಕೃತಜ್ಞತಾ ಕಾಣಿಕೆಯಾಗಿ ಭಕ್ತರ ಸಹಕಾರದೊಂದಿಗೆ ನಿರ್ಮಿಸಿ, ಶ್ರೀಕೃಷ್ಣನಿಗೆ ಸಮರ್ಪಿಸಲು ಸಂಕಲ್ಪಿಸಿದಂತೆ ಸ್ವರ್ಣ ಪಾರ್ಥಸಾರಥಿ ರಥದ ಸಮರ್ಪಣೋತ್ಸವ ಡಿ. 26ರಂದು ಹಾಗೂ ಪ್ರಥಮ ರಥೋತ್ಸವ ಡಿ.27ರಂದು ನಡೆಯಲಿದೆ.
ಆ ಪ್ರಯುಕ್ತ ಡಿ.26ರಂದು ಅಪರಾಹ್ನ 3.30ಕ್ಕೆ ಜೋಡುಕಟ್ಟೆಯಿಂದ ವೈಭವದ ಶೋಭಾಯಾತ್ರೆ ನಡೆಯಲಿದೆ. ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಸಂಜೆ 6ಕ್ಕೆ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಹಸಗೂ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಗಣ್ಯರ ಭಾಗವಹಿಸುವಿಕೆಯೊಂದಿಗೆ ಸಭಾ ಕಾರ್ಯಕ್ರಮ ನಡೆಯಲಿದೆ.
ಡಿ. 27ರಂದು ಸಂಜೆ 6ಕ್ಕೆ ರಥಬೀದಿಯಲ್ಲಿ ಸ್ವರ್ಣ ಪಾರ್ಥಸಾರಥಿ ರಥದಲ್ಲಿ ಶ್ರೀಕೃಷ್ಣನನ್ನು ಕುಳ್ಳಿರಿಸಿ, ಪ್ರಥಮ ಉತ್ಸವಕ್ಕೆ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿರುವರು ಎಂದು ಮಠದ ದಿವಾನ ನಾಗರಾಜ ಆಚಾರ್ಯ ಮತ್ತು ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ.
































