ಸಿಕ್ಕಿಂ : ಕೆಲವೊಮ್ಮೆ ನಮ್ಮ ಕನಸಿಗಾಗಿ ಕೆಲವೊಂದನ್ನು ತ್ಯಾಗ ಮಾಡಬೇಕಾಗುತ್ತದೆ. ಹೀಗೆ ತಾನು ಐಪಿಎಸ್ ಅಧಿಕಾರಿಯಾಗುವ ಕನಸಿಗಾಗಿ ಉತ್ತಮ ಸಂಬಳದ ಕೆಲಸವನ್ನು ತೊರೆದ ದೀಪಿಕಾ ಅಗರ್ವಾಲ್ ಅವರ ಯಶೋಗಾಥೆ ಇದು.
ಸಿಕ್ಕಿಂ ಮೂಲದ ದೀಪಿಕಾ ಅಗರ್ವಾಲ್ ಅವರು, ತಾಶಿ ನಾಮ್ಗ್ಯಾಲ್ ಅಕಾಡೆಮಿ (TNA) ಮತ್ತು ಮೇಯೊ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಮುಗಿಸಿದರು. ಬಳಿಕ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಿಂದ ಬಿ.ಕಾಂ ಪದವಿ ಪಡೆದರು. ನಂತರ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಿಂದ ಎಂಬಿಎ ಪದವಿ ಪಡೆದರು.
ಬಳಿಕ ಬಾಕ್ಲೇðಸ್‌ನಲ್ಲಿ ಹಣಕಾಸು ವಿಶ್ಲೇಷಕರಾಗಿ ಎರಡು ವರ್ಷ ಮತ್ತು ಓಮಿದ್ಯಾರ್ ನೆಟ್‌ವರ್ಕ್ ಇಂಡಿಯಾದಲ್ಲಿ ಹೂಡಿಕೆ ಸಲಹೆಗಾರರಾಗಿ ಒಂದು ವರ್ಷ ಕೆಲಸ ಮಾಡಿದರು. ದೇಶ ಸೇವೆ ಮಾಡುವುದು ದೀಪಿಕಾ ಅವರ ಬಹುದಿನದ ಕನಸಾಗಿತ್ತು.
ಹೀಗಾಗಿ ದೀಪಿಕಾ ಅವರು ಕಾರ್ಪೊರೇಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾಗಲೇ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. ಆದರೆ 2019ರಲ್ಲಿ, ಕೆಲಸ ಮತ್ತು ಪರೀಕ್ಷೆಯ ತಯಾರಿ ಎರಡನ್ನೂ ನಿಭಾಯಿಸುವುದು ಕಷ್ಟವಾಯಿತು. ಬಳಿಕ ತಮ್ಮ ಉತ್ತಮ ಸಂಬಳದ ಕೆಲಸವನ್ನು ತ್ಯಜಿಸಿ, ದೆಹಲಿಗೆ ಸ್ಥಳಾಂತರಗೊಂಡು ಪರೀಕ್ಷೆಗೆ ತಯಾರಿ ನಡೆಸಿದರು.
ದೀಪಿಕಾ ಅಗರ್ವಾಲ್ ಅವರು ವಾಣಿಜ್ಯ ಮತ್ತು ಅಕೌಂಟೆನ್ಸಿ ವಿಷಯವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದರು. 2022ರಲ್ಲಿ ಮೂರನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದ ಅವರು, 151ನೇ ಅಖಿಲ ಭಾರತ ರ‍್ಯಾಂಕ್ ಪಡೆದು ಐಪಿಎಸ್ ಅಧಿಕಾರಿಯಾಗುತ್ತಾರೆ. ಈ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಾರೆ.