ಶ್ರೀನಗರ : ದೆಹಲಿಯ ಕೆಂಪು ಕೋಟೆಯ ಬಳಿ ಸಂಭವಿಸಿದ್ದ ಕಾರು ಸ್ಫೋಟದ ರೂವಾರಿ ಉಮರ್ ಎಂದು ತನಿಖೆ ವೇಳೆ ತಿಳಿದುಬಂದಿದ್ದು, ಅದರ ಬೆನ್ನಲ್ಲೇ ಭದ್ರತಾ ಪಡೆಗಳು ಶುಕ್ರವಾರ ಉಗ್ರನ ಮನೆಯನ್ನು ಧ್ವಂಸಗೊಳಿಸಿವೆ.
ದೆಹಲಿ ಸ್ಫೋಟದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಉಗ್ರರ ಹಿಂದಿನ ರಹಸ್ಯ ಒಂದೊಂದಾಗಿಯೇ ಹೊರಬರುತ್ತಿದೆ. ಡಾ.ಉಮರ್ ನಬಿ ತಾಯಿಯ ಡಿಎನ್‌ಎ ಪರೀಕ್ಷೆ ಮಾಡಿದಾಗ, ಸ್ಫೋಟದ ವೇಳೆ ಕಾರಿನಲ್ಲಿ ಸಿಕ್ಕಿದ್ದ ಶವದ ಡಿಎನ್‌ಎಗೆ ಹೊಂದಾಣಿಕೆಯಾಗಿದೆ. ಇದರಿಂದ ಸ್ಫೋಟದ ಪ್ರಮುಖ ರೂವಾರಿ ಡಾ.ಉಮರ್ ನಬಿ ಎಂಬುದು ಬೆಳಕಿಗೆ ಬಂದಿದೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿದ್ದ ಉಗ್ರ ಉಮರ್‌ನ ಮನೆಯನ್ನು ಶುಕ್ರವಾರ ಭದ್ರತಾ ಪಡೆಗಳು ನೆಲಸಮಗೊಳಿಸಿವೆ. ಈ ಹಿಂದೆ ಪಹಲ್ಗಾಮ್ ದಾಳಿಯ ಸಂದರ್ಭದಲ್ಲಿಯೂ ಕೃತ್ಯದಲ್ಲಿ ಭಾಗಿಯಾದವರ ಮನೆಯನ್ನು ಭದ್ರತಾ ಪಡೆಗಳು ಧ್ವಂಸಗೊಳಿಸಿದ್ದವು.































