ನವದೆಹಲಿ : ಗುಜರಾತ್, ರಾಜಸ್ಥಾನ ಮತ್ತು ದೆಹಲಿಗಳಲ್ಲಿ ಬಡವರ ಮಕ್ಕಳನ್ನು ಕದ್ದು ಶ್ರೀಮಂತರಿಗೆ ಮಾರಾಟ ಮಾಡುತ್ತಿದ್ದ ಶಿಶು ಕಳ್ಳಸಾಗಣೆ ಜಾಲವನ್ನು ಭೇದಿಸಿದ ದೆಹಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಯಶ್ಮಿನ್ (30), ಅಂಜಲಿ (36) ಮತ್ತು ಜಿತೇಂದರ್ (47) ಬಂಧಿತ ಆರೋಪಿಗಳು.
ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆ ನಡೆಸಿದ ದೆಹಲಿ ಪೊಲೀಸರ ತಂಡ, ಏಪ್ರಿಲ್ ೮ರಂದು ಉತ್ತಮ್ ನಗರ ಪ್ರದೇಶದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಗಂಡು ಶಿಶುವನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ
ಗುಜರಾತ್ ಮತ್ತು ರಾಜಸ್ಥಾನದ ಬಡ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದ ಈ ಗ್ಯಾಂಗ್, ಮಕ್ಕಳನ್ನು ಕದ್ದು ದೆಹಲಿಯ ಮಕ್ಕಳಿಲ್ಲದ ಶ್ರೀಮಂತ ದಂಪತಿಗೆ ಮಾರಾಟ ಮಾಡುತ್ತಿದ್ದರು. ಮಾರಾಟ ಮಾಡುವ ಪ್ರತಿ ಮಗುವಿಗೆ 5 ರಿಂದ 10 ಲಕ್ಷದವರೆಗೆ ಹಣ ಪಡೆಯುತ್ತಿದ್ದರು ಎಂದು ಆರೋಪಿಗಳ ವಿಚಾರಣೆ ವೇಳೆ ತಿಳಿದು ಬಂದಿದೆ.
ಈ ಗ್ಯಾಂಗ್‌ನ ಇತರ ಸದಸ್ಯರನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದು ವರೆಗೆ 35ಕ್ಕೂ ಹೆಚ್ಚು ಶಿಶುಗಳನ್ನು ಈ ಗ್ಯಾಂಗ್ ಕಳ್ಳಸಾಗಣೆ ಮಾಡಿದೆ. ರಕ್ಷಿಸಲಾದ ಶಿಶುವನ್ನು ಆರೈಕೆಯಲ್ಲಿ ಇರಿಸಲಾಗಿದ್ದು, ಅದರ ಪೋಷಕರನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ಉಪ ಪೊಲೀಸ್ ಆಯುಕ್ತ ಅಂಕಿತ್ ಸಿಂಗ್ ತಿಳಿಸಿದ್ದಾರೆ.