ಡೆಲ್ಲಿ ದಂಗಲ್‌ನಲ್ಲಿ ಗೆದ್ದು ಬೀಗಿರೋ ಬಿಜೆಪಿ ಸರ್ಕಾರ ರಚನೆಗೆ ಸಜ್ಜಾಗಿದೆ. 27 ವರ್ಷದ ವನವಾಸ ಮುಗಿಸಿ ಪುಟಿದೆದ್ದ ಕೇಸರಿ ಪಡೆಯಲ್ಲಿ ಸಿಎಂ ಪಟ್ಟಕ್ಕೆ ಅಚ್ಚರಿಯ ಅಭ್ಯರ್ಥಿಯ ಆಯ್ಕೆಯಾಗಿದೆ. ಮಹಿಳೆಯನ್ನ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿ ಕಮಲ ಪಡೆ ಕೌತುಕದ ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ ಪಟ್ಟಕ್ಕೆ ಇವತ್ತು ಪಟ್ಟಾಭಿಷೇಕ ನಡೆಯಲಿದೆ.
ಮೊದಲ ಬಾರಿ ಶಾಸಕಿಗೆ ಒಲಿದ ಡೆಲ್ಲಿ ಸಿಎಂ ಪಟ್ಟ!
ದೆಹಲಿ ಮುಖ್ಯಮಂತ್ರಿ ಯಾರಾಗ್ತಾರೆಂಬ ಕುತೂಹಲಕ್ಕೆ ಬಿಜೆಪಿ ತೆರೆ ಎಳೆದಿದೆ. ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿ ಗೆದ್ದ ಪರ್ವೇಶ್ ವರ್ಮಾ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಆಶಿಶ್ ಸೂದ್, ಜಿತೇಂದ್ರ ಮಹಾಜನ್, ರೇಖಾ ಗುಪ್ತಾ ಮುಂತಾದವರ ಹೆಸರು ಸಿಎಂ ರೇಸ್ನಲ್ಲಿತ್ತು. ಈ ಪೈಕಿ ರೇಖಾ ಗುಪ್ತಾರನ್ನು ದೆಹಲಿ ಮುಖ್ಯಮಂತ್ರಿಯಾಗಿ ಕೇಸರಿ ಪಾಳಯ ಆಯ್ಕೆ ಮಾಡಿದೆ.
ಶಾಲಿಮಾರ್ ಭಾಗ್ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕಿಯಾಗಿದ್ರೂ ರೇಖಾ ಗುಪ್ತಾಗೆ ಜಾಕ್ಪಾಟ್ ಹೊಡೆದಿದೆ. ವಿಶೇಷ ಏನಂದ್ರೆ ಎಲ್ಲರೂ ಸಿಎಂ ಆಗ್ತಾರೆ ಅಂತಾನೇ ಉಹಿಸಿದ್ದ ಪರ್ವೇಶ್ ವರ್ಮಾರೇ ಖುದ್ದು ರೇಖಾ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್‌ನ ಶೀಲಾ ದೀಕ್ಷಿತ್, ಬಿಜೆಪಿಯ ಸುಷ್ಮಾ ಸ್ವರಾಜ್, ಆಮ್ ಆದ್ಮಿ ಪಕ್ಷದ ಅತಿಶಿ ಸಿಂಗ್ ಬಳಿಕ ಡೆಲ್ಲಿಯ 4ನೇ ಮಹಿಳಾ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಆಯ್ಕೆಯಾಗಿದ್ದಾರೆ.
ಯಾರು ರೇಖಾ ಗುಪ್ತಾ?
1974ರಲ್ಲಿ ಹರಿಯಾಣದ ಜಿಂದ್ ಜಿಲ್ಲೆಯ ನಂದಗಢದಲ್ಲಿ ರೇಖಾ ಗುಪ್ತಾ ಜನಿಸಿದ್ದಾರೆ. ರೇಖಾ ಅವರ ತಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ರು. ಬಳಿಕ ರೇಖಾಗೆ ಎರಡು ವರ್ಷವಾದಾಗ ಇವರ ಕುಟುಂಬ ದೆಹಲಿಗೆ ಸ್ಥಳಾಂತರವಾಗುತ್ತದೆ. ಹೀಗಾಗಿ ದೆಹಲಿಯಲ್ಲೇ ತಮ್ಮ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣವನ್ನ ಮುಗಿಸಿದ್ದಾರೆ. 1992ರಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ ರೇಖಾ ಎಬಿವಿಪಿ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ರು. ಕಾಲೇಜಿನ ದಿನಗಳಲ್ಲೇ ರಾಜಕೀಯದಲ್ಲಿ ಸಕ್ರಿಯವಾಗಿದ್ರು. 1996-97ರಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕಳೆದ 30 ವರ್ಷಗಳಿಂದಲೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಮೊದಲ ಬಾರಿ 2007 ರಲ್ಲಿ ಉತ್ತರ ಪಿತಂಪುರದಿಂದ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದ ರೇಖಾ, ಮೂರು ಬಾರಿ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಬನಿಯಾ ಸಮುದಾಯಕ್ಕೆ ಸೇರಿದ ರೇಖಾ ಗುಪ್ತಾ ಡೆಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.