ನವದೆಹಲಿ :ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ದಟ್ಟವಾದ ಮಂಜು ಆವೃತಗೊಂಡ ,ಹಿನ್ನಲೆ ವಿಮಾನ ಮತ್ತು ರೈಲುಗಳ ಸಂಚಾರದಲ್ಲಿ ಭಾರಿ ವ್ಯತ್ಯಯವಾಗಿದೆ.
ಫ್ಲೈಟ್ ಮಾನಿಟರಿಂಗ್ ವೆಬ್‌ಸೈಟ್ ಫ್ಲೈಟ್‌ರಾಡಾರ್ ಪ್ರಕಾರ, ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರು ವಿಮಾನಗಳನ್ನು ರದ್ದುಗೊಳಿಸಲಾಗಿದೆ. 215 ವಿಮಾನಗಳ ಆಗಮನ ವಿಳಂಬವಾಗಿದೆ. ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ 17 ಹೊರಡುವ ವಿಮಾನಗಳು ವಿಳಂಬವಾಗಿದೆ. 10 ವಿಮಾನಗಳು ರದ್ದಾಗಿದೆ. 36 ಆಗಮಿಸುವ ವಿಮಾನಗಳು ವಿಳಂಬವಾಗಿವೆ.
ಶುಕ್ರವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ರನ್‌ವೇ ಗೋಚರತೆ ಶೂನ್ಯವಾಗಿತ್ತು. ವಿಮಾನ ಕಾರ್ಯಾಚರಣೆಗಳಿಗೆ ಸಂಭಾವ್ಯ ಅಡಚಣೆಗಳ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಎಚ್ಚರಿಸಿದ್ದಾರೆ. ಇಂಡಿಗೋ ಮತ್ತು ಸ್ಪೈಸ್‌ಜೆಟ್ ಹವಾಮಾನ ವಿಳಂಬಗಳ ವಿರುದ್ಧ ಎಚ್ಚರಿಕೆ ನೀಡಿವೆ.
ಮಂಜಿನ ವಾತಾವರಣದಿಂದಾಗಿ ಹಲವಾರು ದೂರದ ಸೇವೆಗಳು ಸೇರಿದಂತೆ ಕನಿಷ್ಠ 24 ರೈಲುಗಳು ತಡವಾಗಿ ಓಡುತ್ತಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಇವುಗಳಲ್ಲಿ ಕೆಲವು ರೈಲುಗಳು 4-5 ಗಂಟೆಗಳವರೆಗೆ ವಿಳಂಬವಾಗಿವೆ. ಕರ್ನಾಟಕ ಎಕ್ಸ್‌ಪ್ರೆಸ್ ಮತ್ತು ಬಿಹಾರ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್, ಭಟಿಂಡಾ-ಬಾಲೂರ್‌ಘಾಟ್ ಫರಕ್ಕಾ ಎಕ್ಸ್‌ಪ್ರೆಸ್, ಆಂಧ್ರಪ್ರದೇಶ ಎಕ್ಸ್‌ಪ್ರೆಸ್, ಅಯೋಧ್ಯೆ ಎಕ್ಸ್‌ಪ್ರೆಸ್ ರೈಲುಗಳು ವಿಳಂಬವಾಗುತ್ತಿವೆ.
ನೋಯ್ಡಾದಲ್ಲಿ, ಜ.8ರವರೆಗೆ ಶಾಲಾ ತರಗತಿಗಳಿಗಳನ್ನು ಮುಚ್ಚಲಾಗುವುದು ಎಂದು ಜಿಲ್ಲಾ ಅಧಿಕಾರಿಗಳು ಘೋಷಿಸಿದ್ದಾರೆ. ನೋಯ್ಡಾದಲ್ಲಿ ಶುಕ್ರವಾರ ಕನಿಷ್ಠ 8 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಪಂಜಾಬ್ ಮತ್ತು ಬಿಹಾರ ಸೇರಿದಂತೆ ರಾಜ್ಯಗಳಲ್ಲಿ ದಟ್ಟವಾದ ಮಂಜಿನ ಜೊತೆಗೆ ತೀವ್ರವಾದ ಚಳಿ ಅಲೆಯನ್ನು ಅನುಭವಿಸುತ್ತಿದೆ. ಪಾಟ್ನಾ ಸೇರಿದಂತೆ ಬಿಹಾರದ ಹಲವಾರು ಭಾಗಗಳಲ್ಲಿ ಹವಮಾನ ಕುಸಿದಿರುವುದರಿಂದ, ಮುಂದಿನ ಮೂರರಿಂದ ನಾಲ್ಕು ದಿನಗಳಲ್ಲಿ ಕನಿಷ್ಠ ತಾಪಮಾನವು 6-11 ಡಿಗ್ರಿ ಸೆಲ್ಸಿಯಸ್ ನಡುವೆ ಉಳಿಯುವ ನಿರೀಕ್ಷೆಯಿದೆ. ಇದಕ್ಕೆ ಸ್ಪಂದಿಸಿದ ಸರ್ಕಾರ ಶಾಲಾ ಸಮಯದಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.