ಲಖನೌ : ಕುಂಭಮೇಳದಲ್ಲಿ ಜ.29ರ ಮೌನಿ ಅಮವಾಸ್ಯೆಯಂದು 30 ಭಕ್ತರ ಸಾವಿಗೆ ಕಾರಣವಾದ ಕಾಲ್ತುಳಿತ ಘಟನೆ ಪಿತೂರಿಯ ಭಾಗವಾಗಿರಬಹುದು ಎಂದು ಉತ್ತರ ಪ್ರದೇಶ ಪೊಲೀಸರು ಶಂಕಿಸಿದ್ದಾರೆ.
ಘಟನೆಯ ತನಿಖೆ ಚುರುಕುಗೊಳಿಸಿರುವ ಪೊಲೀಸರು ಪಿತೂರಿ ದಿಕ್ಕಿನಲ್ಲೂ ಪರಿಶೀಲನೆ ತೀವ್ರಗೊಳಿಸಿದ್ದಾರೆ. ಇದರ ಭಾಗವಾಗಿ ಘಟನೆ ಸಂಭವಿಸಿದ ದಿನ, ತ್ರಿವೇಣಿ ಸಂಗಮದ ಪ್ರದೇಶದಲ್ಲಿ ಸಕ್ರಿಯವಾಗಿದ್ದ 16 ಸಾವಿರ ಮೊಬೈಲ್ ನಂಬರ್ಗಳ ಕರೆ ವಿವರ ಸೇರಿದಂತೆ ಸಮಗ್ರ ವಿವರ ಕಲೆ ಹಾಕುತ್ತಿದ್ದಾರೆ.
‘ಮಧ್ಯರಾತ್ರಿ ಕಾಲ್ತುಳಿತ ಸಂಭವಿಸಿದ ವೇಳೆ ಸಕ್ರಿಯವಾಗಿದ್ದ ಸಹಸ್ರಾರು ಮೊಬೈಲ್ ಫೋನ್ ಸಂಖ್ಯೆಗಳ ದತ್ತಾಂಶವನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (ಎಸ್ಟಿಎಫ್) ವಿಶ್ಲೇಷಿಸುತ್ತಿದೆ’ ಎಂದು ಮೂಲಗಳು ತಿಳಿಸಿವೆ. ‘ತನಿಖೆಯ ಭಾಗವಾಗಿ ಸುಮಾರು 16 ಸಾವಿರ ಮೊಬೈಲ್ ಫೋನ್ ಸಂಖ್ಯೆಗಳ ದತ್ತಾಂಶವನ್ನು ಪರಿಶೀಲಿಸಲಾಗುತ್ತಿದೆ. ಇವುಗಳಲ್ಲಿ ಬಹುತೇಕ ಸಂಖ್ಯೆಗಳು ದುರಂತದ ಬಳಿಕ ಸ್ವಿಚ್ಡ್ಆಫ್ ಆಗಿವೆ’ ಎಂದು ಮೂಲಗಳು ಮಾಹಿತಿ ನೀಡಿವೆ.
‘ಕಾಲ್ತುಳಿತವು ಪಿತೂರಿಯಿಂದ ಸಂಭವಿಸಿತ್ತೇ ಎಂಬ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದೇವೆ’ ಎಂದು ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ನೂಕುನುಗ್ಗಲು ಉಂಟಾದ ರಾತ್ರಿ ಭಕ್ತರನ್ನು ಉದ್ದೇಶಪೂರ್ವಕವಾಗಿ ಮುಂದಕ್ಕೆ ತಳ್ಳಿದ ಯುವಕರ ಗುಂಪನ್ನು ಪೊಲೀಸರು ಹುಡುಕುತ್ತಿದ್ದಾರೆ. ಈ ಸಂಬಂಧ ಮಹಾಕುಂಭದಲ್ಲಿ ಬಳೆಗಳು ಮತ್ತು ಪೂಜಾ ಸಾಮಗ್ರಿಗಳನ್ನು ಮಾರುವವರನ್ನು ಪ್ರಶ್ನಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.
‘ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ವಿಶ್ಲೇಷಿಸಲಾಗುತ್ತಿದೆ. ಚಹರೆ ಗುರುತಿಸುವ ಆ್ಯಪ್ ನೆರವನ್ನು ಪಡೆದು ಅವರನ್ನು ಗುರುತಿಸಲು ಯತ್ನಿಸುತ್ತಿದ್ದೇವೆ’ ಎಂದು ಅಧಿಕಾರಿ ಹೇಳಿದ್ದಾರೆ. ‘ಸದ್ಯ ನಾವು ವಸಂತ ಪಂಚಮಿಯ ದಿನ ನಡೆಯುವ ಮೂರನೇ ಅಮೃತ ಸ್ನಾನದತ್ತ (ಸೋಮವಾರ) ಗಮನ ಕೇಂದ್ರೀಕರಿಸಿದ್ದೇವೆ. ಆ ದಿನ ಯಾವುದೇ ಅವಘಡಗಳು ನಡೆಯದಂತೆ ಎಚ್ಚರವಹಿಸಿದ್ದೇವೆ. ಆ ಬಳಿಕ ತನಿಖೆ ವೇಗ ಪಡೆದುಕೊಳ್ಳಲಿದೆ’ ಎಂದು ಅವರು ಹೇಳಿದ್ದಾರೆ.