ಮಂಗಳೂರು: ಮಕ್ಕಳಲ್ಲಿ ರಕ್ತಹೀನತೆ ತಡೆಯಲು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನಡೆಸಲಾದ ಹಿಮೋಗ್ಲೋಬಿನ್ ಪರೀಕ್ಷೆ ಮುಕ್ತಾಯಗೊಂಡಿದೆ. ವರದಿಯ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ 5063 ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆ ಇರುವುದು ಬೆಳಕಿಗೆ ಬಂದಿದೆ.
ಒಂದು ತಿಂಗಳಿನಿಂದ ಜಿಲ್ಲೆಯ 1ನೇ ತರಗತಿಯಿಂದ 10 ರವರೆಗಿನ ಸರಕಾರಿ ಮತ್ತು ಅನುದಾನಿತ ಶಾಲೆಗಳ 49,575 ಮಕ್ಕಳಿಗೆ ಆರೋಗ್ಯ ಇಲಾಖೆಯಿಂದ ರಕ್ತಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 2609 ಮಂದಿಗೆ ಸೌಮ್ಯ ಪ್ರಕರಣ, 2444 ಮಂದಿಗೆ ಮಧ್ಯಮ ಮತ್ತು 10 ಮಂದಿಗೆ ತೀವ್ರ ರಕ್ತಹೀನತೆ ಇರುವುದು ಪತ್ತೆಯಾಗಿದೆ.
“ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ’ ಎಂಬ ಹೆಸರಿನಲ್ಲಿ ಅಭಿಯಾನ ನಡೆದಿದ್ದು, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಒಬ್ಬರು ವೈದರು, ನರ್ಸ್, ಕಣ್ಣಿನ ತಜ್ಞರು ಎಲ್ಲಾ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಎಷ್ಟಿದೆ? ಎಂದು ಪರೀಕ್ಷೆ ನಡೆಸಿದರು.
ತೀವ್ರ ಪ್ರಮಾಣದಲ್ಲಿ ಬಳಲುತ್ತಿದ್ದರೆ ಆ ಮಕ್ಕಳನ್ನು ತಾಲೂಕು, ಜಿಲ್ಲಾಸ್ಪತ್ರೆಯ ಮಕ್ಕಳ ತಜ್ಞರಲ್ಲಿ ಶಿಫಾರಸ್ಸು ಮಾಡಲಾಗುತ್ತದೆ. ಸೌಮ್ಯ ಮತ್ತು ಮಧ್ಯಮ ಪ್ರಮಾಣದಲ್ಲಿದ್ದರೆ ಅವರಿಗೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಈ ಕಾಯಿಲೆಯನ್ನು ಔಷಧಗಳಲ್ಲೇ ಕಾಯಿಲೆ ಗುಣಪಡಿಸಲು ಸಾಧ್ಯ ಎನ್ನುತ್ತಾರೆ ವೈದ್ಯರು.
ಅನೀಮಿಯ ಲಕ್ಷಣವೇನು?
ಪೌಷ್ಠಿಕ ಆಹಾರ ಕೊರತೆಯು ಅನೀಮಿಯಕ್ಕೆ ಮುಖ್ಯ ಕಾರಣ. ಕಬ್ಬಿಣಾಂಶ ಕೊರತೆಯಿಂದ ಹಿಮೋಗ್ಲೋಬಿನ್ ಕಡಿಮೆಯಾಗುತ್ತದೆ. ಇದರಿಂದ ದೈಹಿಕ, ಮಾನಸಿಕ ಬೆಳವಣಿಗೆ ಕಡಿಮೆಯಾಗುತ್ತದೆ. ತಲೆ ಸುತ್ತುವುದು, ಸುಸ್ತು, ಆಯಾಸದಿಂದ ದೇಹದಲ್ಲಿ ಶಕ್ತಿ ಕುಗ್ಗುತ್ತದೆ. ತಲೆ ಸುತ್ತುವುದು, ನಿಶ್ಯಕ್ತಿ, ಅತಿಯಾದ ಸುಸ್ತು ಉಂಟಾಗುತ್ತದೆ. ದೇಹಕ್ಕೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು. ಹಸಿವು ಇಲ್ಲದೇ ಇರುವುದು, ರೋಗ ನಿರೋಧಕ ಅಂಶ ಕುಂಠಿತವಾಗುತ್ತದೆ. ಆಗಾಗ ಎರಡೂ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕಾಲುಗಳಲ್ಲಿ ಬಾವು ಕಂಡುಬರುವ ಸಾಧ್ಯತೆಯೂ ಇರುತ್ತದೆ.