ಚಿತ್ರದುರ್ಗ: ಜಿಲ್ಲಾ ಪಂಚಾಯಿತಿಯಿಂದ ನಿಯೋಜನೆಗೊಂಡ ಲೆಕ್ಕ ತನಿಖಾ ತಂಡಕ್ಕೆ ದಾಖಲೆಗಳನ್ನು ಒದಗಿಸುವಂತೆ ಸೂಚಿಸಲಾಗಿದ್ದರೂ ಸಹ, ದಾಖಲೆಗಳನ್ನು ಹಾಜರುಪಡಿಸದೇ ಕರ್ತವ್ಯ ಲೋಪವೆಸಗಿದ ಚಳ್ಳಕೆರೆ ತಾಲ್ಲೂಕು ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ವೇದವ್ಯಾಸಲು ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ.
ಚಳ್ಳಕೆರೆ ತಾಲ್ಲೂಕು ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ 2023-24 ರಿಂದ 2024-25ನೇ ಸಾಲಿನವರೆಗಿನ ಪಂಚಾಯತಿಯಲ್ಲಿ 15ನೇ ಹಣಕಾಸು, ವರ್ಗ-1 ಇ-ಸ್ವತ್ತು ನರೇಗಾ ಹಾಗೂ ಇತರೆ ಯೋಜನೆಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ವಿಶೇಷ ಲೆಕ್ಕ ತನಿಖೆಗೆ ನಿಯೋಜಿಸಿದ್ದು, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪರವಾಗಿ ಲೆಕ್ಕ ಪರಿಶೋಧಕರು ಲೆಕ್ಕ ತನಿಖೆಗೆ ದಾಖಲೆಗಳನ್ನು ಹಾಜರುಪಡಿಸಲು ಸೂಚಿಸಲಾಗಿದ್ದರೂ ಸಹಾ, ತನಿಖೆಗೆ ಒದಗಿಸಬೇಕಾದ ದಾಖಲೆಗಳಾದ 2023-24 ರಿಂದ 2024-25 ಸಾಲಿನವರೆಗಿನ 15ನೇ ಹಣಕಾಸು, ವರ್ಗ-1, ಇ-ಸ್ವತ್ತು ನರೇಗಾ ಹಾಗೂ ಇತರೆ ಯೋಜನೆಗಳಲ್ಲಿ ಭರಿಸಲಾಗಿರುವ ವೆಚ್ಚ ರೂ. 2,31,54,326 ಗಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಹಾಜರುಪಡಿಸಿರುವುದಿಲ್ಲ. 2023-24 ಮತ್ತು 2024-25ನೇ ಸಾಲಿನಲ್ಲಿ 15ನೇ ಹಣಕಾಸು ಯೋಜನೆಯಲ್ಲಿ ರೂ.84,40,121 ಗಳಿಗೆ ಒದಗಿಸಿರುವ ಓಚರ್‍ಗಳು ಮತ್ತು ಲೆಕ್ಕ ಪತ್ರಗಳನ್ನು ಪರಿಶೀಲಿಸಲಾಗಿ ಟೆಂಡರ್ ಕರೆಯದೇ ರೂ. 1.00 ಲಕ್ಷಕ್ಕಿಂತ ಹೆಚ್ಚು ಮೊತ್ತವನ್ನು ಖರೀದಿಗಳಿಗೆ ವೆಚ್ಚ ಭರಿಸಿದ್ದು, ನಿಯಮಾನುಸಾರ ಕ್ರಮ ಕೈಗೊಳ್ಳದೇ ಪಾವತಿ ಮಾಡಿರುವುದು ಕಂಡುಬಂದಿರುತ್ತದೆ. ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ-1993, ಕೆ.ಟಿ.ಪಿ.ಪಿ ನಿಯಮ ಹಾಗೂ ಇತರೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸದಿರುವುದು ಕಂಡುಬಂದಿರುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಗಳು ವರದಿಯನ್ನು ಸಲ್ಲಿಸಿರುತ್ತಾರೆ.
ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ, ಚಳ್ಳಕೆರೆ ತಾಲ್ಲೂಕು ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇದವ್ಯಾಸಲು ಅವರು ಒಬ್ಬ ಜವಾಬ್ದಾರಿಯುತ, ಸರ್ಕಾರಿ ನೌಕರರಾಗಿದ್ದುಕೊಂಡು, ಜಿಲ್ಲಾ ಪಂಚಾಯತಿಯಿಂದ ನಿಯೋಜನೆಗೊಂಡ ಲೆಕ್ಕ ತನಿಖಾ ತಂಡಕ್ಕೆ ದಾಖಲೆಗಳನ್ನು ಒದಗಿಸುವಂತೆ ಸೂಚಿಸಲಾಗಿದ್ದರೂ ಸಹ ಕೋರಿರುವ ದಾಖಲೆಗಳನ್ನು ಹಾಜರುಪಡಿಸದೇ ಕರ್ತವ್ಯ ಲೋಪವೆಸಗುವ ಮೂಲಕ ಸರ್ಕಾರಿ ನೌಕರರ ವೃತ್ತಿಗೆ ತರವಲ್ಲದ ರೀತಿ ವರ್ತಿಸಿ, ಕರ್ನಾಟಕ ನಾಗರೀಕ ಸೇವಾ (ನಡವಳಿ) ನಿಯಮಾವಳಿಗಳನ್ನು ಉಲ್ಲಂಘಿಸಿರುವುದು, ಕಂಡು ಬಂದಿರುವ ಕಾರಣ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರಿ ಎಸ್.ಜೆ.ಸೋಮಶೇಖರ್ ಆದೇಶದಲ್ಲಿ ತಿಳಿಸಿದ್ದಾರೆ.