ಕೇಂದ್ರದಲ್ಲಿ ಯಾವ ಪಕ್ಷದ ಸರ್ಕಾರವಿದ್ದರೂ ನೀವು ಮುಲಾಜಿಗೆ ಬೀಳದೇ ಕರ್ನಾಟಕದ ಹಿತಾಸಕ್ತಿಯ ರಕ್ಷಣೆಯ ಪ್ರಶ್ನೆ ಎದುರಾದಾಗ ದನಿ ಎತ್ತುತ್ತಾ ಬಂದ್ದಿದ್ದೀರಿ. ಆ ಮುತ್ಸದ್ದಿ ದೇವೇಗೌಡರನ್ನು ಕಾಣಲು ಕನ್ನಡಿಗರು ಬಯಸುತ್ತಿದ್ದಾರೆ. ದೇವೇಗೌಡರೇ ದೈಹಿಕವಾಗಿ ನೀವು ಸ್ವಲ್ಪ ಕುಗ್ಗಿದಂತೆ ಕಂಡರೂ, ಮಾನಸಿಕವಾಗಿ ನೀವಿನ್ನೂ ದೃಢವಾಗಿದ್ದೀರಿ. ದಯವಿಟ್ಟು ಈಗಲಾದರೂ ಪಕ್ಷ ರಾಜಕಾರಣವನ್ನು ಮೀರಿ, ಒಬ್ಬ ಮುತ್ಸದ್ದಿ ನಾಯಕನ ರೀತಿಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆಗೆ ಮುಂದಾಗಬೇಕು ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರು, ಕೇಂದ್ರ ಸರ್ಕಾರದ ವಕ್ತಾರರಂತೆ, ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ. ಕೇಂದ್ರ ಸಂಪುಟದಲ್ಲಿ ಮಗನನ್ನು ಸಚಿವನನ್ನಾಗಿ ಮಾಡಲು ಇಷ್ಟೊಂದು ರಾಜಿ ಮಾಡಿಕೊಳ್ಳುವ ಅಗತ್ಯ ಇತ್ತಾ? ಎಂದು ಜನ ಪ್ರಶ್ನಿಸುತ್ತಿದ್ದಾರೆ. ನೀರಾವರಿ ವಿಚಾರದಲ್ಲಿ ಮೋದಿ ಸರ್ಕಾರ ಕನ್ನಡಿಗರ ಹಿತವನ್ನ ಬಲಿಕೊಡಲು ಹೊರಟಿದೆ. ನಾನು ದೇವೇಗೌಡರಿಗೆ ಬಿಡಿಸಿ ಹೇಳಬೇಕಾಗಿಲ್ಲ ಎಂದರು.
ಕೃಷ್ಣಾ ಮತ್ತು ಕಾವೇರಿ ನದಿಗಳ ಜೋಡಣೆಯ ನೀರಾವರಿ ಯೋಜನೆಯ ಬಗ್ಗೆ ನಿಮ್ಮ ಕಳಕಳಿಗೆ ನಮ್ಮ ಸಂಪೂರ್ಣ ಸಹಕಾರ ಇದೆ. ಈ ವಿಷಯದಲ್ಲಿ ನೀವು ನಡೆಸುವ ಹೋರಾಟಕ್ಕೆ ನಾನು ಮತ್ತು ಡಿ.ಕೆ.ಶಿವಕುಮಾರ್ ಮಾತ್ರವಲ್ಲ, ಸಮಸ್ತ ಕರ್ನಾಟಕ ನಿಮ್ಮ ಜೊತೆ ಇರುತ್ತದೆ. ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳ ಸರಮಾಲೆಯನ್ನು ಸದ್ಯ ನೀರಾವರಿ ಕ್ಷೇತ್ರಕ್ಕೆ ಅಷ್ಟೇ ಸೀಮಿತಗೊಳಿಸುತ್ತಿದ್ದೇನೆ. ಇನ್ನು ತೆರಿಗೆ ಹಂಚಿಕೆ, ಪ್ರಕೃತಿ ವಿಕೋಪ ಪರಿಹಾರ, ಕುಡಿಯುವ ನೀರು ಪೂರೈಕೆ, ರೈಲ್ವೆ ಯೋಜನೆಗಳ ವಿಚಾರದಲ್ಲಿಯೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕರ್ನಾಟಕವನ್ನು ಶತ್ರು ರಾಜ್ಯದಂತೆ ನಡೆಸಿಕೊಳ್ಳುತ್ತಿದೆ. ಈ ವಿಚಾರಗಳು ಕೂಡಾ ನಿಮಗೆ ಗೊತ್ತಿರುವುದರಿಂದ ಸಂಸತ್‌ನಲ್ಲಿ ಈ ಬಗ್ಗೆ ನೀವು ದನಿ ಎತ್ತುತ್ತೀರಿ ಎಂದು ರಾಜ್ಯದ ಜನರು ನಿರೀಕ್ಷಿಸಿದ್ದರು ಎಂದು ಹೇಳಿದರು.