ಮಹಾರಾಷ್ಟ್ರ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ‘ಮಹಾಯುತಿ’ ಮೈತ್ರಿಕೂಟವು ಸರಕಾರ ರಚನೆ ಕಸರತ್ತು ಮುಂದುವರಿಸಿದ್ದು, ಬಿಜೆಪಿ ಹಿರಿಯ ನಾಯಕ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ.
ಮತ್ತೆ ಇಬ್ಬರಿಗೆ ಡಿಸಿಎಂ ಪಟ್ಟ?
ಫಡ್ನವಿಸ್ ಮುಖ್ಯಮಂತ್ರಿ ಹುದ್ದೆ ನೀಡಿದರೆ ಶಿಂಧೆ ಹಾಗೂ ಅಜಿತ್ ಪವರ್ ಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಪ್ರಮುಖ ಖಾತೆಗಳನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಬಿಜೆಪಿ 21 ಖಾತೆಗಳನ್ನು ಉಳಿಸಿಕೊಂಡು ಅಜಿತ್ ಪಕ್ಷಕ್ಕೆ 10 ಶಿಂದೆ ಪಕ್ಷಕ್ಕೆ 12 ಸಚಿವ ಸ್ಥಾನಗಳನ್ನು ನೀಡುವ ಸಾಧ್ಯತೆ ಇದೆ. ಇದೇ ವೇಳೆ ಫಡ್ನವಿಸ್ ಗೆ ಬೆಂಬಲ ಸೂಚಿಸುವಂತೆ ಅಜಿತ್ ಪವಾರ್ ಎಲ್ಲಾ ಶಾಸಕರಿಗೂ ಸೂಚಿಸಿದ್ದಾರೆ ಎನ್ನಲಾಗಿದೆ.ಇನ್ನು ಎರಡು ಮೂರು ದಿನಗಳಲ್ಲಿ ಪ್ರಮಾಣವಚನ ಸ್ವೀಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಆದರೆ ಏಕನಾಥ್ ಶಿಂಧೆ ಬಣದ ಶಿವಸೇನೆ ಸಂಸದ ನರೇಶ್ ಮಹಸ್ಕೆ ಅವರು ಬಿಹಾರ ಮಾದರಿ ಮುಂದಿಟ್ಟುಕೊಂಡು ಶಿಂಧೆ ಅವರನ್ನೇ ಸಿಎಂ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ ಅಧಿಕ ಸ್ಥಾನ ಪಡೆದಿದ್ದರೂ ಕಡಿಮೆ ಸ್ಥಾನಗಳನ್ನು ಹೊಂದಿರುವ ಜೆಡಿಯು ಪಕ್ಷದ ನಾಯಕ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲಾಗಿದೆ. ಅದೇ ಸೂತ್ರವನ್ನು ಮಹಾರಾಷ್ಟ್ರದಲ್ಲೂ ಅನುಸರಿಸಬೇಕು ಎಂದು ಅವರು ಹೇಳಿದ್ದಾರೆ.