ಮುಂಬೈ : ಮಹಾರಾಷ್ಟ್ರದಲ್ಲಿ ಇಂದು (ಡಿಸೆಂಬರ್ 5) ನೂತನ ಸರ್ಕಾರ ರಚನೆಯಾಗಲಿದೆ. ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಹಾಗೂ ಇಬ್ಬರು ಉಪ ಮುಖ್ಯಮಂತ್ರಿಗಳಾಗಿ ಏಕನಾಥ್ ಶಿಂಧೆ, ಅಜಿತ್ ಪವಾರ್ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮಹಾಯುತಿ ಮೈತ್ರಿಕೂಟದ ಮೂರು ಪಕ್ಷಗಳ ನಡುವೆ ವಿವಿಧ ಇತರ ಸಚಿವಾಲಯಗಳನ್ನು ಹಂಚಲಾಗಿದೆ.ಶಿವಸೇನೆ ಪ್ರಕಾರ, ಹೊಸ ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳಾಗಿ ಅಜಿತ್ ಪವಾರ್ ಜೊತೆಗೆ ಏಕನಾಥ್ ಶಿಂಧೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಾತ್ರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೊದಲು ನಿರ್ಧರಿಸಲಾಗಿತ್ತು. ಆದರೆ, ಈಗ ಇಬ್ಬರು ಡಿಸಿಎಂಗಳು ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಘೋಷಿಸಲಾಗಿದೆ.
ನಿನ್ನೆ ಮಹಾರಾಷ್ಟ್ರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾದ ನಂತರ ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ. ದೇವೇಂದ್ರ ಫಡ್ನವಿಸ್, ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರು ಮಹಾಯುತಿ ಸರ್ಕಾರ ರಚಿಸಲು ತಮ್ಮ ಹಕ್ಕು ಮಂಡಿಸಲು ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಭೇಟಿಯಾಗಿದ್ದರು.
ಇಂದು ಸಂಜೆ 5:30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.