ಚಿತ್ರದುರ್ಗ : ಕುಡಿತದಿಂದ ಜೀವನ ಹಾಳಾಗುವುದಲ್ಲದೆ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತದೆ ಎಂದು ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತ ಸಂಶೋಧನಾ ಕೇಂದ್ರ ಲಾಯಿಲ, ಉಜುರೆ ಬೆಳ್ತಂಗಡಿ ಹಾಗೂ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಚಿತ್ರದುರ್ಗ ತಾಲ್ಲೂಕು ಇವುಗಳ ಸಂಯುಕ್ತಾಶ್ರಯದಲ್ಲಿ ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಸೋಮವಾರದಿಂದ ಡಿ.16 ರವರೆಗೆ ಎಂಟು ದಿನಗಳ ಕಾಲ ನಡೆಯುವ 1895 ನೇ ಮದ್ಯವರ್ಜನ ಶಿಬಿರ ಉದ್ಗಾಟಿಸಿ ಮಾತನಾಡಿದರು.
ಮದ್ಯಪಾನಕ್ಕೆ ದಾಸರಾಗಿರುವವರು ಮದ್ಯವರ್ಜನ ಶಿಬಿರದ ಪ್ರಯೋಜನ ಪಡೆದುಕೊಂಡು ಮದ್ಯಪಾನ ಸೇವನೆಯಿಂದ ಹೊರ ಬಂದು ಹೊಸ ಜೀವನ ಕಂಡುಕೊಳ್ಳಿ ಎಂದು ಮದ್ಯ ವ್ಯಸನಿಗಳಿಗೆ ಸಲಹೆ ನೀಡಿದರು.
ಪೊಲೀಸ್ ಉಪಾಧೀಕ್ಷಕ ದಿನಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತ ಮದ್ಯ ವ್ಯಸನದಿಂದ ಮನೆಯಲ್ಲಿ ಗಲಾಟೆಯಾಗುತ್ತದಲ್ಲದೆ ಇಡಿ ಕುಟುಂಬವೆ ಶಾಂತಿಯನ್ನು ಕಳೆದುಕೊಳ್ಳುತ್ತದೆ. ಇದರಿಂದ ಕೊಲೆ, ದರೋಡೆ, ಸುಲಿಗೆ ಇನ್ನಿತರೆ ಕಾನೂನು ಬಾಹಿರ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಅದಕ್ಕಾಗಿ ಮದ್ಯಪಾನದಿಂದ ಹೊರಬಂದು ಹೊಸ ನವಜೀವನ ಕಟ್ಟಿಕೊಳ್ಳಿ ಎಂದು ಹೇಳಿದರು.
ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೆಚ್.ಮಂಜಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಕುಡಿತ ಬಿಟ್ಟರೆ ಇಡಿ ಕುಟುಂಬವೇ ಸುಖವಾಗಿರುತ್ತದೆ. ಇಲ್ಲದಿದ್ದರೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಸಂಸಾರದಲ್ಲಿ ನೆಮ್ಮದಿಯಿಲ್ಲದಂತಾಗುತ್ತದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಇಂತಹ ಅತ್ಯುತ್ತಮ ಕಾರ್ಯಕ್ರಮ ಇನ್ನು ಹೆಚ್ಚು ಹೆಚ್ಚಾಗಿ ನಡೆಯಬೇಕು. ಕೇವಲ ಒಂಬತ್ತು ದಿನಗಳಿಗಷ್ಠೆ ಶಿಬಿರ ಸೀಮಿತವಾಗಿರಬಾರದು. ವರ್ಷದ 365 ದಿನವೂ ಶಿಬಿರ ನಡೆಯುತ್ತಿರಬೇಕು. ಇಲ್ಲಿಗೆ ಬಂದಿರುವ ಮದ್ಯವ್ಯಸನಿಗಳು ಇನ್ನು ಮುಂದೆ ಮದ್ಯಸೇವನೆ ಮಾಡುವುದಿಲ್ಲವೆಂದು ಸಂಕಲ್ಪ ಮಾಡಿ ಹೊರ ಹೋದ ನಂತರ ಹೊಸ ಬದುಕು ಕಂಡುಕೊಳ್ಳಬೇಕೆಂದು ವಿನಂತಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನಾಗರಾಜ್ಸಂಗಂ ಮಾತನಾಡಿ ಮನುಷ್ಯ ಆರೋಗ್ಯವಂತನಾಗಿರಬೇಕಾದರೆ ಮೊದಲು ದುಶ್ಚಟಗಳಿಂದ ದೂರವಿರಬೇಕು. ಬದಲಾವಣೆ ಜಗದ ನಿಯಮ. ಮದ್ಯವರ್ಜನ ಶಿಬಿರದಲ್ಲಿ ನೀವುಗಳು ಎಂಟು ದಿನ ಕಷ್ಟಪಟ್ಟರೆ ಕುಡಿತವನ್ನು ತ್ಯಜಿಸಿ ಒಳ್ಳೆ ಮಾರ್ಗಕ್ಕೆ ಹೋಗುತ್ತೀರ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಮಾತನಾಡುತ್ತ ನಿಮ್ಮ ಜೀವನ ಸುಖಮಯವಾಗಿರಬೇಕೆಂದರೆ ಕುಡಿತವನ್ನು ಬಿಡಬೇಕು. ಆಗ ಮಾತ್ರ ಇಡಿ ಕುಟುಂಬವೇ ನೆಮ್ಮದಿ ಜೀವನ ಸಾಗಿಸಲು ಸಾಧ್ಯ. ಮದ್ಯವರ್ಜನ ಶಿಬಿರದಿಂದ ಮನಃ ಪರಿವರ್ತನೆ ಮಾಡಿಕೊಂಡು ಹೊಸ ಜೀವನಕ್ಕೆ ಕಾಲಿಡಿ ಎಂದು ಮನವಿ ಮಾಡಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ರೂಪ ಜನಾರ್ಧನ್ ಮಾತನಾಡಿ ಮದ್ಯಪಾನಕ್ಕೆ ಬಲಿಯಾಗಿ ಸತ್ತ ಪ್ರಜೆಯಂತೆ ಬದುಕುವ ಬದಲು ಸತ್ಪ್ರಜೆಯಂತೆ ಬದುಕಿದರೆ ಸಮಾಜದಲ್ಲಿ ಗೌರವ ಸಿಗುತ್ತದೆ. ಹಾಗಾಗಿ ಮದ್ಯಸೇವನೆಯನ್ನು ಬಿಟ್ಟು ಉತ್ತಮ ಮಾರ್ಗದಲ್ಲಿ ಸಾಗಿ ಎಂದು ಮದ್ಯವ್ಯಸನಿಗಳಿಗೆ ಕರೆ ನೀಡಿದರು.
ಪರಮೇಶ್ ವೇದಿಕೆಯಲ್ಲಿದ್ದರು. ಜಿಲ್ಲಾ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಯೋಜನಾಧಿಕಾರಿ ಬಿ.ಅಶೋಕ್ ಮೇಲ್ವಿಚಾರಕ ಬಾಲಕೃಷ್ಣ ಎಂ. ಮದ್ಯವರ್ಜನ ಶಿಬಿರದಲ್ಲಿದ್ದರು.